ADVERTISEMENT

ಮಾಂಜ್ರಾ ನೀರು ಸ್ಥಗಿತ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 10:20 IST
Last Updated 21 ಏಪ್ರಿಲ್ 2013, 10:20 IST

ಔರಾದ್: ಕೆಲವು ತಿಂಗಳಿನಿಂದ ಕೌಠಾ ಬಳಿಯ ಮಾಂಜ್ರಾ ನದಿ ನೀರನ್ನು ತಡೆ ಹಿಡಿದ ಪರಿಣಾಮ ಗಡಿ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರ ಎದ್ದಿದೆ. ನದಿಯಲ್ಲಿ ಗುಂಡಿ ಅಗೆದರೂ ಹನಿ ನೀರು ಗೋಚರಿಸದ ಸ್ಥಿತಿ ಇದೆ.

ಬೇಸಿಗೆಯಲ್ಲಿ ಬೀದರ್ ನಗರದ ಜನತೆಗೆ ಕುಡಿಯುವ ನೀರಿಗೆ ಕೊರತೆಯಾಗಬಾರದು ಎಂದು ಎರಡು ತಿಂಗಳ ಹಿಂದೆಯೇ ಕೌಠಾ ಬಳಿ ಮಾಂಜ್ರಾ ನೀರು ತಡೆಹಿಡಿದಿರುವುದು ಇದಕ್ಕೆ ಕಾರಣವಾಗಿದೆ.

ಇದರಿಂದಾಗಿ ನದಿಯ ಮುಂಭಾಗದ ಪ್ರದೇಶದಲ್ಲಿ ನೀರಿಲ್ಲದೆ ಜನ-ಜಾನುವಾರುಗಳು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿ ಪಾತ್ರದ ಕಂದಗೂಳ, ಖಾನಾಪುರ, ಗಡಿಕುಶನೂರ, ಹಿಪ್ಪಳಗಾಂವ್, ಚಾಂಬೋಳ, ಶ್ರೀಮಂಡಲ, ನೆಮತಾಬಾದ್, ಜಿಲ್ಲರ್ಗಿ ಸೇರಿದಂತೆ ಆಂಧ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹಲವು ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಎದುರಾಗಿದೆ.

`ಈ ಸಂಬಂಧ ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಅವರನ್ನು ಎರಡು ಬಾರಿ ಭೇಟಿ ಮಾಡಿ ಸಮಸ್ಯೆಯ ವಾಸ್ತವ ಚಿತ್ರಣ ನೀಡಿ ವಿಷಯ ಮನವರಿಕೆ ಮಾಡಿಕೊಡಲಾಗಿದೆ' ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಕೌಠಾ ತಿಳಿಸಿದ್ದಾರೆ.

ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಕಳೆದ ಸಾಲಿನ ಬಾಕಿ ಮತ್ತು ಪ್ರಸಕ್ತ ಸಾಲಿನ ಹಣ ಪಾವತಿಸುವಂತೆ ಮತ್ತು ಗಡಿ ಗ್ರಾಮಸ್ಥರಿಗೆ ಮಾಂಜ್ರಾ ನೀರು ಬಿಡುವಂತೆ ರೈತರ ನಿಯೋಗ ಎರಡು ದಿನ ಹಿಂದೆಯಷ್ಟೇ ಜ್ಲ್ಲಿಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

`ನೀರು ಬಿಡಲು ಸೂಚಿಸುವುದಾಗಿ ನಿಯೋಗಕ್ಕೆ ತಿಳಿಸಿದ್ದರು. ಕಾರಂಜಾ ಅಧಿಕಾರಿಗಳನ್ನು ವಿಚಾರಿಸಿದರೆ ನಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ' ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಜಿಲ್ಲಾಡಳಿತದ ವಿರುದ್ಧ ಕಿಡಿ ಕಾರಿದ್ದಾರೆ.

ಅಧಿಕಾರಿಗಳು ಬೀದರ್‌ನಲ್ಲಿ ಕುಳಿತು ಹುಸಿ ಭರವಸೆ ನೀಡಿದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ವಿಶ್ವನಾಥ ಪಾಟೀಲ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.