ADVERTISEMENT

ಮೂಲಸೌಕರ್ಯ ವಂಚಿತ ‘ಕಮಠಾಣಾ’ ಗ್ರಾಮ

ಗ್ರಾಮಾಯಾಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:36 IST
Last Updated 17 ಸೆಪ್ಟೆಂಬರ್ 2013, 6:36 IST

ಜನವಾಡ: ಬೀದರ್ ತಾಲ್ಲೂಕಿನ ಅತಿದೊಡ್ಡ ಗ್ರಾಮಗಳಲ್ಲಿ  ಒಂದಾಗಿ­ರುವ ಕಮಠಾಣಾ ಗ್ರಾಮದಲ್ಲಿ ಸಮಸ್ಯೆ­ಗಳ ಪಟ್ಟಿಯೂ ದೊಡ್ಡ­ದಾಗಿಯೇ ಇದೆ. ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ಈ ಗ್ರಾಮವು ಒಟ್ಟು 22 ಸಾವಿರ ಜನಸಂಖ್ಯೆಯನ್ನು ಹೊಂದಿದೆ.

ಮತದಾರರ ಸಂಖ್ಯೆ 9 ಸಾವಿರಕ್ಕೂ ಹೆಚ್ಚಿದೆ. ಆದರೂ, ಗ್ರಾಮದಲ್ಲಿ ಇರುವ ಮೂಲಸೌಕರ್ಯಗಳು ಮಾತ್ರ ಅಷ್ಟಕಷ್ಟೇ. ಗ್ರಾಮದಲ್ಲಿ ಒಂದು ತೆರೆದ ಬಾವಿ ಇದ್ದು, 10 ಹ್ಯಾಂಡ್ ಪಂಪ್ ಇವೆ.  ಇವುಗಳ ಪೈಕಿ ಆರು ಹ್ಯಾಂಡ್ ಪಂಪ್ ಗಳಷ್ಟೇ ಚಾಲ್ತಿಯಲ್ಲಿವೆ. ಇನ್ನುಳಿದವು ನಿರುಪಯುಕ್ತ ಆಗಿದ್ದರೂ ದುರಸ್ತಿ ಕೆಲಸ ಮಾತ್ರ ಆಗಿಲ್ಲ. ಹೀಗಾಗಿ, ಪ್ರತಿ ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ.

ಗ್ರಾಮವು ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆಯಾಗಿದ್ದರೂ ಇನ್ನೂ ಬಹುತೇಕ ಯಾವುದೇ ರಸ್ತೆಯು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆ  ಆಗಿಲ್ಲ. ಯೋಜನೆಯ ಕೆಲಸ ವ್ಯವಸ್ಥಿತವಾಗಿ ಆಗುತ್ತಿಲ್ಲ. ಒಂದು ಪ್ರದೇಶದಲ್ಲಿ ಸಂಪೂರ್ಣ ಕೆಲಸ ಮುಗಿಸದೇ ಮತ್ತೊಂದು ಪ್ರದೇಶದಲ್ಲಿ ಕಾಮಗಾರಿ­ಯನ್ನು ಕೈಗೆತ್ತಿ­ಕೊಳ್ಳ­ಲಾಗುತ್ತಿದೆ. ಮುಖ್ಯ ರಸ್ತೆಗಳಿಗೆ ಈವರೆಗೂ ಸಿ.ಸಿ.ರಸ್ತೆ ಭಾಗ್ಯ ಬಂದಿಲ್ಲ ಎಂಬ ಅಳಲು ಗ್ರಾಮಸ್ಥರದು.

ಇನ್ನು ಚರಂಡಿಗಳದೂ ಇದೇ ಕಥೆ. ಅಲ್ಲದೆ, ಇರುವ ಚರಂಡಿಗಳನ್ನು ನಿಯಮಿತವಾಗಿ ಶುಚಿಗೊಳಿಸುವುದಿಲ್ಲ. ಚರಂಡಿಯ ಹೊಲಸು ನೀರು ರಸ್ತೆಯ ಮೇಲೇ ಹರಿದಾಡುತ್ತದೆ. ಊರಿನ ಸುತ್ತಲೂ ಇರುವ ಕಂದಕಗಳಲ್ಲಿ  ಹೊಲಸು ನೀರು ತುಂಬಿಕೊಂಡಿದ್ದರೂ ಶುಚಿಗೊಳಿಸುವ ಕೆಲಸ ನಡೆಯುತ್ತಿಲ್ಲ  ಎಂದು ಆರೋಪಿಸುತ್ತಾರೆ.

ಗ್ರಾಮಗಳಲ್ಲಿನ ರಸ್ತೆಗಳು ಕಿರಿ­ದಾಗಿದ್ದು, ಸಂಚಾರ ದುಸ್ತರವಾಗಿದೆ. ಹೀಗಾಗಿ ರಸ್ತೆಗಳನ್ನು 30 ಅಡಿ ವ್ಯಾಪ್ತಿಗೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ.

ಮಹಾತ್ಮಾಗಾಂಧಿ ರಾಷ್ಟ್ರೀಯ  ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿಲ್ಲ. ಯಂತ್ರವನ್ನು ಬಳಸಿ ಕಾಮಗಾರಿಯನ್ನು ಕೈಗೆತ್ತಿ­ಕೊಳ್ಳ­ಲಾಗುತ್ತಿದೆ. ಜೊತೆಗೆ ಕಾರ್ಮಿಕರ ಹೆಸರಿನಲ್ಲಿ ಖೊಟ್ಟಿ ಖಾತೆ ತೆರೆದು ಹಣ ಎತ್ತಿ ಹಾಕ­ಲಾಗುತ್ತದೆ ಎಂದು ಆಪಾದಿಸುತ್ತಾರೆ.

ನಿರ್ಮಲ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯಕ್ಕಾಗಿ ನೆರವು ಬಂದಿದೆ. ಆದರೆ, ಇದುವರೆಗೂ ಫಲಾನುಭವಿಗಳಿಗೆ ಬಿಡುಗಡೆ ಮಾಡಿಲ್ಲ  ಎಂಬ ದೂರು ಯುವ ಮುಖಂಡ ಬಸಯ್ಯ ಸ್ವಾಮಿ ಅವರದು. ಗ್ರಾಮ ಸಭೆಯಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಮನೆ ಮಂಜೂರು ಆಗಿದೆ. ಆದರೆ, ಮನೆ ನಿರ್ಮಿಸಲು ಅವಕಾಶ ಕೊಡುತ್ತಿಲ್ಲ. ಒಮ್ಮೆ ರದ್ದಾಗಿದೆ ಎಂದರೆ, ಇನ್ನೊಮ್ಮೆ ಶಾಸಕರಿಂದ ಮಾತನಾಡಿಸಿ ಎಂದು ಗೋಳಿಡುತ್ತಾರೆ ಗಣಪತಿ ಹೌದಿಖಾನಿ.

ಸಂಬಂಧಿಸಿದವರು ಗ್ರಾಮಕ್ಕೆ ಅಗತ್ಯ ನಾಗರಿಕ ಸೌಕರ್ಯಗಳನ್ನು ಒದಗಿಸಲು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ. ಈ ಕುರಿತು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಿದರೆ ಗ್ರಾಮದಲ್ಲಿ ಚರಂಡಿ ಶುಚಿಗೊಳಿಸಲಾಗಿದೆ. ದಾರಿದೀಪ ಹಾಕಲಾಗಿದೆ ಎಂದು ತಿಳಿಸುತ್ತಾರೆ.

ಉದ್ಯೋಗ ಖಾತರಿ ಯೋಜನೆ­ಯಲ್ಲಿ ಅವ್ಯವಹಾರ ಆಗಿಲ್ಲ. ಅರ್ಹರಿಗಷ್ಟೇ ಕೆಲಸ ನೀಡಲಾಗಿದೆ. ಪರಶೀಲನೆ ಬಳಿಕ ನಿರ್ಮಲ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣದ ಚೆಕ್ ವಿತರಿಸಲಾಗುವುದು. ಇಂದಿರಾ ಅವಾಸ್್ ಯೋಜನೆಯಡಿ ಮನೆ ನಿರ್ಮಾಣ ಮಾಡಿದವರಿಗೆ ಈಗಾಗಲೇ ಚೆಕ್ ವಿತರಣೆ ಆಗಿದೆ. ಕಟ್ಟದೇ ಇರುವವರಿಗೆ ಮಾತ್ರ ನೀಡಿಲ್ಲ  ಎಂದು ವಿವರಣೆ ನೀಡುತ್ತಾರೆ ಅವರು.

ಕಿರಿದಾದ ರಸ್ತೆಗಳಿಂದ ಸಮಸ್ಯೆ
ಗ್ರಾಮದಲ್ಲಿ ಕಿರಿದಾದ ರಸ್ತೆಗಳಿದ್ದು, ಸಂಚಾರ ಸಮಸ್ಯೆಯಾಗಿದೆ. ರಸ್ತೆಯ ಎರಡೂ ಕಡೆಯಿಂದ ಒಮ್ಮೆಲೆ ಭಾರಿ ವಾಹನಗಳು ಬಂದರೆ ಸಂಚಾರ ಸಮಸ್ಯೆಯಾಗಲಿದೆ. ರಸ್ತೆಯನ್ನು30 ಅಡಿಗೆ ಅಗಲೀಕರಣ ಮಾಡುವ ಅಗತ್ಯವಿದೆ.
–ಮಹಮ್ಮದ್ ಅಲಿ, ಯುವ ಮುಖಂಡ.

ಚೆಕ್‌ ವಿತರಣೆ ಆಗಿಲ್ಲ
ನಿರ್ಮಲ ಭಾರತ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ಚೆಕ್್ ವಿತರಣೆ ಆಗಿಲ್ಲ. ಸುವರ್ಣ ಗ್ರಾಮೋದಯ ಕಾಮಗಾರಿ ಒಂದೆಡೆಯಿಂದ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಇದುವರೆಗೂ ಮುಖ್ಯ ರಸ್ತೆಗಳು ಸಿ.ಸಿ.ರಸ್ತೆಗಳು ಆಗಿಲ್ಲ. ಸಂಬಂಧಿಸಿದವರು ಗಮನಹರಿಸಬೇಕು.
–ಬಸಯ್ಯ ಸ್ವಾಮಿ, ಯುವ ಮುಖಂಡ.

ಕರ ಪಾವತಿಸಿದರೂ ಸ್ವಚ್ಛತೆ ಇಲ್ಲ

ಪಡಿತರ ಚೀಟಿಗಾಗಿ ಗ್ರಾಮಸ್ಥರು ಸಂಪೂರ್ಣ ಕರ ಪಾವತಿಸಿದ್ದಾರೆ. ಆದರೂ, ಪಂಚಾಯಿತಿಯಿಂದ ಚರಂಡಿಗಳನ್ನು ಶುಚಿಗೊಳಿಸುತ್ತಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಖಾತರಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ  ಒದಗಿಸದೆ ಖೊಟ್ಟಿ ಖಾತೆಗೆ ಹಣ ಪಾವತಿಸಲಾಗಿದೆ. ಪಿಡಿಒ ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗೆಗೂ ಗಮನ ಹರಿಸಬೇಕು.
–ಉಮೇಶ್ ಯಾಬಾ, ಗ್ರಾಮ ಪಂಚಾಯಿತಿ ಸದಸ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.