ADVERTISEMENT

ಮೂಲ ಸೌಕರ್ಯಕ್ಕೆ ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 11:05 IST
Last Updated 8 ಜನವರಿ 2011, 11:05 IST

ಬೀದರ್: ಸೌಕರ್ಯಕ್ಕೆ ಆಗ್ರಹಿಸಿ ನಗರದ ಚನ್ನಬಸವನಗರ ನಿವಾಸಿಗಳು ನಗರದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು. ಕಾಲೊನಿಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ನಾಗರಿಕರು ಅಲ್ಲಿ 20 ನಿಮಿಷಗಳ ಕಾಲ ರಸ್ತೆ ತಡೆ ಮಾಡಿದರು. ಹೀಗಾಗಿ ವೃತ್ತದ ನಾಲ್ಕೂ ರಸ್ತೆಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಪ್ರಯಾಣಿಕರು ಪರದಾಟ ನಡೆಸಿದರು. ನಗರದ ಕರ್ನಾಟಕ ಕಾಲೇಜು ಹಿಂದುಗಡೆ ಇರುವ ಬಡಾವಣೆಯಲ್ಲಿ ಯಾವುದೇ ರೀತಿಯ ನಾಗರಿಕ ಸೌಕರ್ಯಗಳಿಲ್ಲ. ಹೀಗಾಗಿ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.

ಬಡಾವಣೆಯಲ್ಲಿ ಕೆಲಕಡೆ ಹೊರತುಪಡಿಸಿದರೆ ರಸ್ತೆಗಳಿಲ್ಲ. ಕಾರಣ ಕಲ್ಲು ಮುಳ್ಳುಗಳ ನಡುವೆ ನಡೆದುಕೊಂಡು ಹೋಗಬೇಕಾಗಿದೆ. ಚರಂಡಿಗಳಿಲ್ಲದೇ ಇರುವುದರಿಂದ ಹೊಲಸು ನೀರು ರಸ್ತೆಗಳ ಮೇಲೆ ಹರಿದಾಡುತ್ತಿದೆ. ಅಲ್ಲದೇ ಬಾವಿಗಳಿಗೆ ಸೇರಿ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಆಪಾದಿಸಿದ್ದಾರೆ. ವಿದ್ಯುತ್ ಕಂಬಗಳಿದ್ದರೂ ದೀಪಗಳಿಲ್ಲ. ಹಾಗಾಗಿ ಕತ್ತಲಲ್ಲಿ ಓಡಾಡಬೇಕಾದ ಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸಂಬಂಧಪಟ್ಟವರು ಕೂಡಲೇ ಬಡಾವಣೆಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.ಅನ್ಯಾಯ ವಿರುದ್ಧ  ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಅಧ್ಯಕ್ಷ ಶಾಮಣ್ಣ ಬಾವಗಿ, ಬಡಾವಣೆಯ ಪ್ರಮುಖರಾದ ಸಂಗಶೆಟ್ಟಿ ಉದಗೀರೆ, ರಮೇಶ ಮೂಲಗೆ, ಶಿವರಾಜ ಕೊಡ್ಡಿ, ವೀರಶೆಟ್ಟಿ ಟೇಲರ್, ರೇವಣ್ಣಸಿದ್ದಯ್ಯ ಸ್ವಾಮಿ, ಮಹಾದೇವ ಕೋರೆ, ಚಂದ್ರಕಾಂತ ಸ್ವಾರಳ್ಳಿ, ಅಂಬಾದಾಸ, ವೈಜಿನಾಥ ಗುನ್ನಳ್ಳಿ, ಶೋಭಾವತಿ, ಅನೂಷಯಾ, ಸರಸ್ವತಿ, ಇಂದುಮತಿ, ಕಾವೇರಿ, ಉಮಾದೇವಿ, ಜಗದೇವಿ ಮತ್ತಿರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.