ADVERTISEMENT

ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:05 IST
Last Updated 20 ಜನವರಿ 2011, 8:05 IST

ಹುಮನಾಬಾದ್: ಕ್ಷೇತ್ರದಲ್ಲಿನ 16 ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡುವುದಾಗಿ ದುಬಲಗುಂಡಿ ಜಿಲ್ಲಾ ಪಂಚಾಯಿತಿ ನೂತನ ಸದಸ್ಯೆ ಚಂದ್ರಮ್ಮ ಗಂಗಶೆಟ್ಟಿ ತಿಳಿಸಿದರು. ತಾಲ್ಲೂಕಿನ ದುಬಲಗುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮತ ನೀಡಿ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು ಹಾಗೂ ಮತದಾರ ಬಂಧುಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು. ಅಹವಾಲು ಸ್ವೀಕರಿಸುವ ಸಂಬಂಧ ಕ್ಷೇತ್ರದ ಕೇಂದ್ರ ಗ್ರಾಮ ದುಬಲಗುಂಡಿಯಲ್ಲಿಶೀಘ್ರದಲ್ಲೇ ನೂತನ ಕಚೇರಿ ಆರಂಭಿಸಲಾಗುವುದು ಎಂದರು. ಸನ್ಮಾನ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ ಶಿರಶೆಟ್ಟಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಗ್ರಾಮದ ಅಭಿವೃದ್ದಿಗೆ ಗ್ರಾಮ ಪಂಚಾಯಿತಿ ಅನುದಾನ ಕೊರತೆ ಆಗುವ ಕಾರಣ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಸದಸ್ಯರು ದುಬಲಗುಂಡಿ ಪಂಚಾಯಿತಿ ಅಭಿವೃದ್ದಿಗೆ ಹೆಚ್ಚಿನ ನೆರವು ನೀಡಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ ನಾತೆ ಮನವಿ ಮಾಡಿದರು.

ಉಪಾಧ್ಯಕ್ಷ ಮೆರಾಜ್ ಭಾಲ್ಕಿಬೇಸ್, ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ ಮತ್ತು ಗ್ರಾಮಸ್ಥರು ಇದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರತನಕುಮಾರ ಸ್ವಾಗತಿಸಿ, ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.