ಬೆಂಗಳೂರು: ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದ್ದು, ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದರು.
ಶಾಸಕ ಈಶ್ವರ ಖಂಡ್ರೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಯೋಜನಾವಾರು ನೀರಿನ ಹಂಚಿಕೆ ಮಾಡಲಾಗಿದೆ. ಕಾರಂಜಾ ಯೋಜಗೆ 9.27ಟಿ.ಎಂ.ಸಿ, ಚುಳ್ಕಿನಾಲಾ ಯೋಜನೆಗೆ 1.17 ಟಿ.ಎಂ.ಸಿ, ಮಾಂಜ್ರಾ ನದಿಗೆ ಅಡ್ಡಲಾಗಿ ನಾಲ್ಕು ಸರಣಿ ಬ್ಯಾರೇಜುಗಳಿಗೆ 4.08 ಟಿ.ಎಂ.ಸಿ ನೀರಿನ ಹಂಚಿಕೆ ಮಾಡಲಾಗಿದೆ ಎಂದರು.
ಚುಳ್ಕಿನಾಲಾ ಯೋಜನೆ ಅಡಿ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಯೋಜನೆಯಿಂದ ಒಟ್ಟು 4,047 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ. ಇದರಲ್ಲಿ 3,237 ಹೆಕ್ಟೇರ್ ಪ್ರದೇಶ ಭಾಲ್ಕಿ ಪ್ರದೇಶಕ್ಕೆ ಒಳಪಟ್ಟಿದೆ ಎಂದರು.
ಮಾಂಜ್ರಾ ನದಿಗೆ ಅಡ್ಡಲಾಗಿ 4 ಸರಣಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗಳು ಪೂರ್ಣವಾಗಿವೆ. ಸದರಿ ಬ್ಯಾರೇಜುಗಳ ನಿರ್ಮಾಣದಿಂದ ಶೇಖರಣೆಯಾಗುವ ನೀರನ್ನು ರೈತರು ಸ್ವಂತ ಪಂಪ್‌ಸೆಟ್ ಬಳಸಿ ನೀರಾವರಿಗೆ ಬಳಸಿಕೊಳ್ಳಬಹುದು ಎಂದು ವಿವರಿಸಿದರು.
ಬಹುತೇಕ ಪೂರ್ಣಗೊಂಡಿರುವ ಕಾರಂಜಾ ಯೋಜನೆ ಅಡಿ 22,793 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ. ಇತ್ತೀಚೆಗೆ ಕೈಗೊಂಡಿರುವ ಏತ ನೀರಾವರಿ ಕಾಮಗಾರಿ ಹಾಗೂ ಬಲದಂಡೆ ಕಾಲುವೆ ಅಡಿ ಒಂದು ವಿತರಣಾ ಕಾಲುವೆ ನಿರ್ಮಾಣವನ್ನು ಪೂರ್ಣಗೊಳಿಸಿದರೆ 2,818 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಂತ್ರಸ್ತರ ಬೇಡಿಕೆಯಂತೆ ಜಲಾಶಯದ ಹಿನ್ನೀರಿನಲ್ಲಿ ಕೈಗೊಂಡಿರುವ ಅತಿವಾಳ್ ಯೋಜನೆ ಪೂರ್ಣಗೊಳಿಸಿದರೆ 3,616 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬಹುದು. ಕಾರಂಜಾ ಯೋಜನೆಗೆ ಕೇಂದ್ರದಿಂದ ಸಹಾಯ ಧನ ಪಡೆದುಕೊಳ್ಳಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 74.95 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ವನ್ಯಮೃಗಗಳ ರಕ್ಷಣೆಗೆ ಕ್ರಮ: ಜಿಲ್ಲೆಯಲ್ಲಿರುವ ಜಿಂಕೆಗಳು, ನವಿಲುಗಳು, ಕೃಷ್ಣಮೃಗಗಳು, ಕಾಡುಹಂದಿಗಳು ಸೇರಿದಂತೆ ಇತರೆ ವನ್ಯಮೃಗಗಳ ರಕ್ಷಣೆಗಾಗಿ ವಿಶೇಷ ಯೋಜನೆಗಳು ಇಲ್ಲ. ಆದರೆ ಕಾಡಿನಲ್ಲಿ ಗಸ್ತು ತಿರುಗುವುದು, ಪ್ರಾಣಿಗಳು ಗಾಯಗೊಂಡಾಗ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು, ಪ್ರಾಣಿಗಳು ಹೆಚ್ಚಿರುವ ಕಾಡುಗಳಲ್ಲಿ ಜಮೀನು ಒತ್ತುವರಿ ಪ್ರದೇಶವನ್ನು ತೆರವುಗೊಳಿಸುವುದು ಇನ್ನೂ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ರಸ್ತೆ ಬದಿಯಲ್ಲಿ ಗಿಡ ನೆಡಲು ಮತ್ತು ಅರಣ್ಯ ಬೆಳೆಸಲು ಸರ್ಕಾರದಿಂದ ಮಾಡಿರುವ ವೆಚ್ಚ ಎಷ್ಟು ಎಂದು ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರು ಕೇಳಿದ ಪ್ರಶ್ನೆಗೆ ಸಚಿವ ಬಿ.ರಮಾನಾಥ ರೈ, 2010-11, 2011-12 ಹಾಗೂ 2012-13ರಲ್ಲಿ ಕ್ರಮವಾಗಿ ಒಟ್ಟು 57.110, 268.354, 138.850 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಕು ಜಾನುವಾರುಗಳು ಮತ್ತು ಗೂಳಿ ಜಾನುವಾರುಗಳ ಹಾವಳಿ, ಮಳೆಯ ಅಭಾವ, ಹವಾಮಾನ ವೈಪರೀತ್ಯಗಳಿಂದಾಗಿ ನಿರೀಕ್ಷಿತ ಪ್ರಮಾಣದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.