ಬೀದರ್: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ಬಿದ್ರಿ ಕಲೆಯ ‘ಸ್ತಬ್ಧಚಿತ್ರ’ದಲ್ಲಿ ಪ್ರಾತ್ಯಕ್ಷಿಕೆ ನೀಡಿರುವ ಬಿದ್ರಿ ಕಲಾವಿದ ಷಾಹ ರಶೀದ್ ಅಹಮ್ಮದ್ ಖಾದ್ರಿ ಅವರನ್ನು ನಗರದ ಶಾಹೀನ್ ಕಾಲೇಜಿನಲ್ಲಿ ಸೋಮವಾರ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರು, ರಶೀದ್ ಅಹಮ್ಮದ್ ಖಾದ್ರಿ ಅವರಿಗೆ ಶಾಲು ಹೊದಿಸಿ ಸತ್ಕರಿಸಿದರು.
ರಶೀದ್ ಅಹಮ್ಮದ್ ಖಾದ್ರಿ ಅವರು ಕಳೆದ ಮೂರು ದಶಕಗಳಿಂದ ಬಿದ್ರಿ ಕಲೆಯೊಂದಿಗೆ ನಂಟು ಹೊಂದಿದ್ದಾರೆ. ಅವರ ರಕ್ತದ ಕಣ ಕಣದಲ್ಲಿ ಬಿದ್ರಿ ಕಲೆ ಹಾಸುಹೊಕ್ಕಿದೆ. ತಮ್ಮ ಕಲೆಯಿಂದ ಬೀದರ್‌ನ ಬಿದ್ರಿ ಕಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಣ್ಣಿಸಿದರು.
ಅಮೆರಿಕ, ಇಟಲಿ, ಸಿಂಗಾಪುರ, ನೆದರಲ್ಯಾಂಡ್, ಸ್ಪೇನ್, ಕಿಂಗಡಮ್ ಆಫ್ ಬಹೆರಿನ್ ಮತ್ತು ಮಸ್ಕಟ್ ಸೇರಿದಂತೆ ಏಳು ದೇಶಗಳಲ್ಲಿ ಖಾದ್ರಿ ಅವರು ಬಿದ್ರಿ ಕಲೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದಾರೆ. ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಐದು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಪರಿಶ್ರಮ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ ಎನ್ನುವುದಕ್ಕೆ ಖಾದ್ರಿ ಅವರೇ ಉದಾಹರಣೆ ಆಗಿದ್ದಾರೆ ಎಂದು ಹೇಳಿದರು.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳಲ್ಲಿ ಬಿದ್ರಿ ಕಲೆ ಮತ್ತು ಬೀದರ್ ಕೋಟೆಯನ್ನು ಸೇರಿಸಬಹುದು ಎಂದು ಇಲ್ಲಿಯ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಿದ್ದರು. ಎರಡು ವರ್ಷಗಳ ನಂತರ ಅದಕ್ಕೆ ಅನುಮತಿ ದೊರಕಿತ್ತು. ಇಲಾಖೆಯೇ ಆಕರ್ಷಕ ಸ್ತಬ್ಧಚಿತ್ರ ಸಿದ್ಧಪಡಿಸಿತ್ತು. ಅದರಲ್ಲಿ ಪ್ರಾತ್ಯಕ್ಷಿಕೆ ನೀಡುವುದಕ್ಕಾಗಿ ರಶೀದ್ ಅಹಮ್ಮದ್ ಖಾದ್ರಿ ಸೇರಿದಂತೆ ಮೂವರ ತಂಡವನ್ನು ಆಯ್ಕೆಗೊಳಿಸಿತ್ತು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ರಶೀದ್ ಅಹಮ್ಮದ್ ಖಾದ್ರಿ ಅವರು ಭಾವುಕರಾಗಿ ತಮಗೆ ಪ್ರೋತ್ಸಾಹ ನೀಡಿರುವ ಎಲ್ಲರಿಗೂ ಧನ್ಯವಾದ ಎಂದಷ್ಟೇ ಹೇಳಿ ಭಾಷಣ ಮುಗಿಸಿದರು. ರಶೀದ್ ಖಾದ್ರಿ ಅವರು ದೇಶ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಬೀದರ್‌ನ ಹೆಸರು ಉಜ್ವಲಗೊಳಿಸಿದ್ದಾರೆ ಎಂದು ಬಿದ್ರಿ ಕಲಾವಿದರ ಸಂಘದ ಅಧ್ಯಕ್ಷ ಶಾಹೀನ್ ಪಟೇಲ್ ಹೇಳಿದರು.
ಪತ್ರಕರ್ತರಾದ ತಿಪ್ಪಣ್ಣ ಭೋಸ್ಲೆ, ಅಮೀನ್ ನವಾಜ್, ಶೇಕ್ ಗೌಸ್, ಯುಸೂಫ್ ರಹೀಮ್ ಮಾತನಾಡಿದರು. ಪ್ರಾಚಾರ್ಯ ಶೇಕ್ ಶಫಿ ಉಪಸ್ಥಿತರಿದ್ದರು.ಶಾಹೀನ್ ಕಾಲೇಜು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿದ್ರಿ ಕಲಾವಿದರು, ಅಭಿಮಾನಿಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.