ADVERTISEMENT

ರಸ್ತೆ ದುರಸ್ತಿಗೆ ಅಗ್ರಹಿಸಿ ಮಾರುಕಟ್ಟೆ ಬಂದ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಬೀದರ್:  ನಗರದ ಪ್ರಮುಖ ಮಾರುಕಟ್ಟೆ ಗಾಂಧಿಗಂಜ್ ರಸ್ತೆ ದುರಸ್ತಿ ಮಾಡಬೇಕು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿ ಮಿಲ್ ಮಾಲೀಕರು ಹಾಗೂ ವರ್ತಕರು ಗುರುವಾರ ಕೆಲಕಾಲ ದಿಢೀರ್ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಿದರು.

ಮಿಲ್ ಮಾಲೀಕರು, ವರ್ತಕರು ಹಾಗೂ ಕಾರ್ಮಿಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ರಸ್ತೆಗಳು ಹಾಳಾಗಿರುವ ಕಾರಣ ಗಾಂಧಿಗಂಜ್ ವರ್ತಕರು ಹಾಗೂ ರೈತರಿಗೆ ಆಗುತ್ತಿರುವ ಅನಾನುಕೂಲಗಳ ಬಗೆಗೆ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಆರ್. ಮಂಜುನಾಥ ಗಮನ ಸೆಳೆದರು.

ಮಾರುಕಟ್ಟೆಯಲ್ಲಿ ದಶಕದ ಹಿಂದೆ ನಿರ್ಮಿಸಿದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಡೆದಾಡಲು ಬಾರದಂತಾಗಿದೆ. ಚರಂಡಿಗಳು ಸ್ವಚ್ಛತೆ ಕಾಣದೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಹೊಲಸು ನೀರು ಸಂಗ್ರಹವಾಗಿ ದುರ್ವಾಸನೆ ಹರಡುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಬಹುದಾದ ಭೀತಿ ಉಂಟಾಗಿದೆ ಎಂದು ದೂರಿದರು.

ಧಾನ್ಯಗಳನ್ನು ~ಛನ್ನಿ~ ಹಿಡಿದ ನಂತರ ರಸ್ತೆಯಲ್ಲಿ ಬಿಡುವ ಮಣ್ಣನ್ನು ಮಾರುಕಟ್ಟೆ ಸಮಿತಿಯವರು ಎತ್ತುತ್ತಿಲ್ಲ. ಕಾರಣ ರಸ್ತೆಗಳು ಕೆಸರುಮಯ ಆಗುತ್ತಿದ್ದು, ಸಂಚಾರ ದುಸ್ತರವಾಗಿದೆ ಎಂದು ಗೋಳು ತೋಡಿಕೊಂಡರು. ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಬೇಕು, ಚರಂಡಿಗಳನ್ನು ಶುಚಿಗೊಳಿಸಬೇಕು ಎಂದು ಒತ್ತಾಯಿಸಿದರು.

ವಾರದೊಳಗೆ ರಸ್ತೆಯ ಮಧ್ಯೆ ನಿರ್ಮಾಣಗೊಂಡಿರುವ ತಗ್ಗು ದಿನ್ನೆಗಳನ್ನು ತುಂಬಲು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಚನ್ನಮಲ್ಲಪ್ಪ ಹಜ್ಜರಗಿ ಭರವಸೆ ನೀಡಿದರು. ಬಳಿಕ ವರ್ತಕರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ವ್ಯಾಪಾರ ವಹಿವಾಟು ಆರಂಭಿಸಿದರು.

ವರ್ತಕರ ಸಂಘದ ಅಧ್ಯಕ್ಷ ಕಾಶಪ್ಪ ಧನ್ನೂರು, ದಾಲ್ ಮಿಲ್ ಅಸೋಸಿಯೇಷನ್ ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಬಾಬುರಾವ್ ಬಿರಾದಾರ್, ಬಸವರಾಜ ಬಂಡೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.