ADVERTISEMENT

ರಸ್ತೆ ನಿರ್ಮಾಣ: ಜಮೀನಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:15 IST
Last Updated 10 ಸೆಪ್ಟೆಂಬರ್ 2011, 11:15 IST

ಬಸವಕಲ್ಯಾಣ: ಅವಶ್ಯಕತೆ ಇಲ್ಲದಿದ್ದಾಗ್ಯೂ ರಸ್ತೆ ನಿರ್ಮಿಸುತ್ತಿರುವ ಕಾರಣ ತಾಲ್ಲೂಕಿನ ರಾಜೋಳಾ ಗ್ರಾಮದ ಅನೇಕ ರೈತರು ಜಮೀನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ.

ಹುಮನಾಬಾದ್ ತಾಲ್ಲೂಕಿನ ಘಾಟಬೋರೋಳ ಸಮೀಪದ ತಾಂಡಾದಿಂದ ರಾಜೋಳಾವರೆಗೆ ಸುಮಾರು 2.5 ಕಿ.ಮೀ ನಷ್ಟು ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿದೆ.

ಈ ಸ್ಥಳದಲ್ಲಿ ಕಾಲು ದಾರಿ ಇದೆ. ಇಲ್ಲಿಂದ ಎತ್ತಿನ ಬಂಡಿ ಹೋಗುವಷ್ಟು ಜಾಗ ಇದೆ ಆದ್ದರಿಂದ ಯಾರಿಗೂ ಸಮಸ್ಯೆಯಾಗಿಲ್ಲ. ಅಲ್ಲದೆ ಯಾರೂ ಇಲ್ಲಿಂದ ರಸ್ತೆ ನಿರ್ಮಿಸಲು ಆಗ್ರಹಿಸಿಲ್ಲ. ಅಲ್ಲದೆ ಇಲ್ಲಿ ದೊಡ್ಡ ರಸ್ತೆ ನಿರ್ಮಿಸುವ ಅವಶ್ಯಕತೆಯೂ ಇಲ್ಲ.

ಆದರೂ 50 ಅಡಿ ಅಗಲದ ರಸ್ತೆ ನಿರ್ಮಾಣ ಮಾಡುತ್ತಿರುವ ಕಾರಣ ಅನೇಕ ರೈತರು ಜಮೀನು ಕಳೆದುಕೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿ ರಸ್ತೆ ನಿರ್ಮಿಸಬಾರದು ಎಂದು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕಾಮಗಾರಿ ನಿಲ್ಲಿಸಲಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಹೇಬ್ ಪಟೇಲ್ ದೂರಿದ್ದಾರೆ.

ಈಗಾಗಲೇ 1 ಕಿ.ಮೀ ನಷ್ಟು ರಸ್ತೆ ನಿರ್ಮಾಣವಾಗಿದ್ದು ಇನ್ನುಳಿದ ಕಡೆಯೂ ಕೆಲಸ ಭರದಿಂದ ಸಾಗಿದೆ. ಬುಲ್ಡೋಜರ್‌ನಿಂದ ರೈತರ ಜಮೀನಿನಲ್ಲಿ ತಗ್ಗು ತೋಡಲಾಗುತ್ತಿದೆ. ಹೀಗಾಗಿ ರಸ್ತೆ ಪಕ್ಕದಲ್ಲಿನ ಜಮೀನು ಹೋಗುವುದರೊಂದಿಗೆ ಈಗಾಗಲೇ ಹೊಲದಲ್ಲಿ ಬೆಳೆದು ನಿಂತಿರುವ ಬೆಳೆ ಸಹ ನಾಶವಾಗುತ್ತಿದೆ ಎಂದಿದ್ದಾರೆ."

ಇಲ್ಲಿನ ರೈತರಿಗೆ ರಸ್ತೆ ನಿರ್ಮಿಸುವ ಬಗ್ಗೆ ಪೂರ್ವಸೂಚನೆ ಕೊಟ್ಟಿಲ್ಲ. ಅಲ್ಲದೆ ಪರಿಹಾರ ಧನ ಸಹ ಒದಗಿಸಲಾಗಿಲ್ಲ. ಹೀಗೆ ಯಾರ ಒತ್ತಾಯವೂ ಇಲ್ಲದಿದ್ದಾಗ ಹಾಗೂ ಯಾರಿಗೂ ಕೇಳದೆ ರಸ್ತೆ ನಿರ್ಮಿಸಿ ರೈತರ ಜಮೀನು ಹಾಳುಮಾಡುವುದು ಯಾವ ನ್ಯಾಯ. ಸರ್ಕಾರದ ಜಮೀನು ಯಾರಾದರೂ ಕಬಳಿಸಿದಾಗ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ರೈತರ ಜಮೀನನ್ನು ಅಧಿಕಾರಿಗಳೇ ಹಾಳುಮಾಡಿದರೆ ಏನೂ ಮಾಡಬೇಕು.

ಜನೋಪಯೋಗಿ ಕಾರ್ಯಗಳಿಗೆ ಹಣ ವ್ಯಯಿಸುವುದನ್ನು ಬಿಟ್ಟು ಹೀಗೆ ಮನಸ್ಸಿಗೆ ಬಂದಂತೆ ಸರ್ಕಾರದ ಹಣ ಖರ್ಚು ಮಾಡುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ. ಶೀಘ್ರ ಕಾಮಗಾರಿ ನಿಲ್ಲಿಸದಿದ್ದರೆ ರೈತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.