ADVERTISEMENT

ರಾಷ್ಟ್ರ ಪಕ್ಷಿಗೆ ಸಿಕ್ಕಿತು ಪ್ರಾಣ ಭಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 9:25 IST
Last Updated 11 ಆಗಸ್ಟ್ 2012, 9:25 IST
ರಾಷ್ಟ್ರ ಪಕ್ಷಿಗೆ ಸಿಕ್ಕಿತು ಪ್ರಾಣ ಭಿಕ್ಷೆ
ರಾಷ್ಟ್ರ ಪಕ್ಷಿಗೆ ಸಿಕ್ಕಿತು ಪ್ರಾಣ ಭಿಕ್ಷೆ   

ಹುಮನಾಬಾದ್: ತಾಲ್ಲೂಕಿನ ಹುಡಗಿ- ಸಿಂಧನಕೇರಾ ಮಾರ್ಗ ಮಧ್ಯದ ರಾಘವೇಂದ್ರ ಔರಾದಕರ್ ಅವರ ತೋಟದ ಪಕ್ಕದಲ್ಲಿ ಅಸ್ವಸ್ಥಗೊಂಡು ಕುಸಿದುಬಿದ್ದ ಕುರಿತು ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿನೀಡಿ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಅದರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವಿಲು ಕುಸಿದುಬಿದ್ದ ಕುರಿತು ಹುಡಗಿ ಗ್ರಾಮದ ಕಂಟೆಪ್ಪ ಎಂಬುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅವರ ಕರೆ ಮೇರೆಗೆ ಉಪಅರಣ್ಯ ಸಂರಕ್ಷಣಾಧಿಕಾರಿ ವೀರಯ್ಯಸ್ವಾಮಿ ಪೂಜಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ, ಸಮೀಪದ ಹುಡಗಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಕೊಡಿಸಿ, ಹೆಚ್ಚುವರಿ ಚಿಕಿತ್ಸೆ ಸಂಬಂಧ ಹುಮನಾಬಾದ್ ಪಶುವೈದ್ಯಕೀಯ ಆಸ್ಪತ್ರೆಗೆ ತಂದರು.

ಪಶುವೈದ್ಯಕೀಯ ವೈದ್ಯಾಧಿಕಾರಿ ಡಾ.ಗೋವಿಂದಪ್ಪ ಮತ್ತು ಡಾ.ನರಸಪ್ಪ, ಸಿಬ್ಬಂದಿ ಸಂಗಮೇಶ ಪಾಟೀಲ , ವೈಜಿನಾಥ ಅವರುಗಳು ನವಿಲು ಆರೋಗ್ಯ ತಪಾಸಣೆ ಕೈಗೊಂಡು ಚುಚ್ಚುಮದ್ದು ನೀಡಿದರು. ಚಿಕಿತ್ಸೆಯ ಒಂದು ಗಂಟೆ ಬಳಿಕ- ನವಿಲಿನ ಆರೋಗ್ಯ ಕೊಂಚ ಸುಧಾರಣೆ ಕಂಡಿದೆ. ಈ ರೀತಿ ಅಸ್ವಸ್ಥಗೊಂಡಿದ್ದಕ್ಕೆ ಪೌಷ್ಠಿಕ ಆಹಾರ ಕೊರತೆ ಅಥವಾ ವಿಷಾಹಾರ ಸೇವನೆ ಕಾರಣ ಇರುವ ಸಾಧ್ಯತೆ ಇದ್ದು, ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಗೆ ಭೇಟಿ ನೀಡಿದ ಸುದ್ದಿಗಾರರಿಗೆ ವೈದ್ಯರು  ಮಾಹಿತಿ ನೀಡಿದರು. ಅರಣ್ಯ ರಕ್ಷಕ ಸುರೇಶ, ಅರಣ್ಯ ವೀಕ್ಷಕ ಗುಡುಸಾಬ್ ಮತ್ತು ರಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.