ADVERTISEMENT

ವಿದ್ಯುತ್ ಕೊರತೆ: 3 ಎಕರೆ ಬಾಳೆ ನಾಶ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 6:05 IST
Last Updated 6 ಜನವರಿ 2012, 6:05 IST
ವಿದ್ಯುತ್ ಕೊರತೆ: 3 ಎಕರೆ ಬಾಳೆ ನಾಶ!
ವಿದ್ಯುತ್ ಕೊರತೆ: 3 ಎಕರೆ ಬಾಳೆ ನಾಶ!   

ಔರಾದ್: ವಿದ್ಯುತ್ ಕೊರತೆಯಿಂದ ಸಮಯಾನುಸಾರ ನೀರು ಬಿಡಲು ಸಾಧ್ಯವಾಗದೆ ತಾಲ್ಲೂಕಿನ ಗಡಿ ಕುಶನೂರ ಗ್ರಾಮದ ರೈತನೊಬ್ಬನ ಮೂರು ಎಕರೆಯಲ್ಲಿನ ಬಾಳೆ ಹಾನಿಯಾದ ಸಂಗತಿ ಬೆಳಕಿಗೆ ಬಂದಿದೆ.

ಹಾನಿಗೊಳಗಾದ ರೈತ ನರಸಿಂಗ ಶರಣಪ್ಪ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ತಮ್ಮ ಇಲಾಖೆ ಸಂಬಂಧಿತರ ನಿರ್ಲಕ್ಷ್ಯದಿಂದ ನನಗೆ ಸುಮಾರು ಎರಡು ಲಕ್ಷ ರೂಪಾಯಿಗೂ ಜಾಸ್ತಿ ಹಾನಿಯಾಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.

ನನ್ನ ಜಮೀನಿಗೆ ವಿದ್ಯುತ್ ಪೂರೈಕೆಯಾಗುವ ವಿತರಣಾ ಕೇಂದ್ರ (ಟಿಸಿ) ಕಳೆದ ಎಂಟು ತಿಂಗಳಲ್ಲಿ 6 ಸಲ ಸುಟ್ಟುಹೋಗಿದೆ. ಹೊಸ ಟಿಸಿ ಸಮಯಕ್ಕೆ ಸರಿಯಾಗಿ ಅಳವಡಿಸದ ಕಾರಣ ನನ್ನ 3.18 ಎಕರೆ ಜಮೀನಿನಲ್ಲಿನ 1600 ಸಸಿಗಳು ಒಣಗಿ ಹೋಗಿವೆ ಎಂದು ಸಂಬಂಧಿತರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಳೆ ಜೊತೆಗೆ ನನ್ನ ಪಕ್ಕದ ಎಂಟು ಎಕರೆ ಜಮೀನು ವರ್ಷಕ್ಕೆ 1 ಲಕ್ಷ ರೂಪಾಯಿ ಬಾಡಿಗೆ ಮೇಲೆ ಪಡೆಯಲಾಗಿದೆ. ಈ ಹೊಲಕ್ಕೂ ನೀರು ಬಿಡಲು ಸಾಧ್ಯವಾಗದೆ ತೊಗರಿ ಮತ್ತು ಕಡಲೆ ತೇವಾಂಶದ ಕೊರತೆಯಿಂದ ಬೆಳೆ ಒಣಗಿ ಹೋಗಿದೆ. ಹೀಗಾಗಿ ನನ್ನ ಸಹಪಾಠಿ ರೈತನಿಗೆ ಎಲ್ಲಿಂದ ಹಣ ಕೊಡಲಿ ಎಂದು ರೈತ ನರಸಿಂಗ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಬಂಧಿತ ಮೇಲಾಧಿಕಾರಿಗಳು ಕಾಳಜಿ ವಹಿಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಆಗಿರುವ ಹಾನಿ ಭರಿಸಿಕೊಟ್ಟು ನನ್ನ ಹಾಗೂ ಕುಟುಂಬದವರ ಬದುಕಿಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.