ADVERTISEMENT

ವೃದ್ಧಾಪ್ಯವೇತನ ತಡೆ: ಖೂಬಾ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:35 IST
Last Updated 28 ಜನವರಿ 2012, 10:35 IST

ಬಸವಕಲ್ಯಾಣ: ಕೆಲ ತಿಂಗಳಿಂದ ತಾಲ್ಲೂಕಿನ 15 ಸಾವಿರ ಜನರ ವೃದ್ಧಾಪ್ಯವೇತನ, ಅಂಗವಿಕಲರ ವೇತನ ಮತ್ತು ವಿಧವಾವೇತನ ಬಿಡುಗಡೆ ಮಾಡದೆ ಬೇಕೆಂತಲೇ ತೊಂದರೆ ಕೊಡಲಾಗುತ್ತಿದೆ. ಹಣ ಕೊಟ್ಟವರ ಕೆಲಸ ಮಾತ್ರ ಆಗುತ್ತಿದ್ದು ಇಲ್ಲಿನ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಶಾಸಕ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಖೂಬಾ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸಾವಿರಾರು ಜನರೊಂದಿಗೆ ರ‌್ಯಾಲಿ ಮೂಲಕ ಆಗಮಿಸಿ ಇಲ್ಲಿನ ಮಿನಿವಿಧಾನಸೌಧದ ಎದುರು ಧರಣಿ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು.

ಅಧಿಕಾರಿಗಳು ಅಷ್ಟೇ ಅಲ್ಲ; ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಈ ಸರ್ಕಾರದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಲಂಚ ಪ್ರಕರಣದಲ್ಲಿಯೇ ಜೈಲಿಗೆ ಹೋಗಿರುವುದು ನಾಚಿಕೆಗೇಡು ಸಂಗತಿ. ತಾಲ್ಲೂಕಿನ ಶಾಸಕರು ಸಹ ನಿಷ್ಕ್ರೀಯರಾಗಿದ್ದು ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಕಾಳೇಕರ್, ಪಕ್ಷದ ತಾಲ್ಲೂಕು ಅಧ್ಯಕ್ಷ ಶಬ್ಬೀರಪಾಶಾ, ಮುಖಂಡರಾದ ಕೇಶಪ್ಪ ಬಿರಾದಾರ, ಮಹಾದೇವ ಹಸೂರೆ, ದಿಲೀಪಗಿರಿ ಗೋಕುಳ, ಇಸ್ಮಾಯಿಲಸಾಬ್ ಬೆಳಕೋಣಿ, ಡಾ.ಗೌತಮ ಕಾಂಬಳೆ ಮಾತನಾಡಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಜಗನ್ನಾಥರೆಡ್ಡಿ ಅವರಿಗೆ ಸಲ್ಲಿಸಲಾಯಿತು. ವೃದ್ಧಾಪ್ಯವೇತನ ಕೂಡಲೇ ಬಿಡುಗಡೆ ಮಾಡಿಸಬೇಕು. ತಾಲ್ಲೂಕಿನ 30 ಹಳ್ಳಿಗಳಲ್ಲಿ ಉದ್ಭವಿಸಿದ ನೀರಿನ ಸಮಸ್ಯೆ ಬಗೆಹರಿಸಬೇಕು. 7 ಸಾವಿರ ಬಡವರಿಗೆ ಪಡೀತರ ಚೀಟಿ ದೊರಕಿಲ್ಲ. ಅವರಿಗೆ ಶೀಘ್ರ ಚೀಟಿಯ ವ್ಯವಸ್ಥೆ ಮಾಡಬೇಕು. ಅಂಗವಿಕಲರ ಸೌಲಭ್ಯಗಳು ಅರ್ಹರಿಗೆ ದೊರಕಿಸಿ ಕೊಡಬೇಕು. ಪ್ರತಿ ತಾಲ್ಲೂಕಿಗೆ 200 ಮನೆಗಳು ಬಂದಿದ್ದರೂ ತಾಲ್ಲೂಕಿಗೆ ಕೊಡದೆ ಅನ್ಯಾಯ ಮಾಡಲಾಗಿದ್ದು ಈ ಅನ್ಯಾಯ ಸರಿಪಡಿಸಬೇಕು. ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುವುದನ್ನು ನಿಷೇಧಿಸಬೇಕು.

ಗುಣತೀರ್ಥವಾಡಿ, ಸಿರಗಾಪುರ, ಯಳವಂತಗಿ, ಅತ್ಲಾಪುರ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು. ಹದಗೆಟ್ಟ ರಸ್ತೆಗಳ ಡಾಂಬರೀಕರಣ ಮಾಡಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿನ ವೈದ್ಯರ ಹುದ್ದೆ ಭರ್ತಿ ಮಾಡಬೇಕು. ಖಾಲಿಯಿರುವ 67 ಶಿಕ್ಷಕರ ಹುದ್ದೆಗಳನ್ನು ಶೀಘ್ರ ತುಂಬಬೇಕು. ವಿವಿಧ ಇಲಾಖೆಗಳ ದೂರವಾಣಿಗಳು ಯಾವಾಗಲೂ ಚಾಲ್ತಿಯಲ್ಲಿ ಇರುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದ ಮೂಲಕ ವಿನಂತಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ದೇವಿಶಿಲಾ ಮದನೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಳಿದಾಸ ಜಾಧವ, ರವೀಂದ್ರ ಗುಂಗೆ, ಪ್ರಮುಖರಾದ ಮಹಾದೇವ ಪಾಟೀಲ, ಜ್ಞಾನೇಶ್ವರ ಮುಳೆ, ಸುಧಾಕರ ಮದನೆ, ರಶೀದ ಕುರೇಶಿ, ರಾಜೀವ ತ್ರಿಪುರಾಂತ, ಪುಷ್ಕರಾಜ ಹಾರಕೂಡೆ, ಲವಕುಮಾರ ಉಜಳಂಬ, ರಾಮ ಹತ್ತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.