ADVERTISEMENT

ಶರಣ ಸ್ಮಾರಕ ಅಭಿವೃದ್ಧಿಗೆ ರೂ. 5 ಕೋಟಿ: ಸಿಎಂ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 9:25 IST
Last Updated 27 ಏಪ್ರಿಲ್ 2012, 9:25 IST

ಬಸವಕಲ್ಯಾಣ: ಇಲ್ಲಿನ ಶರಣರ ಸ್ಮಾರಕಗಳ ಅಭಿವೃದ್ಧಿ ಕಾರ್ಯಕ್ಕಾಗಿ ತುರ್ತಾಗಿ ಬೇಕಾಗಿರುವ 5 ಕೋಟಿ ರೂಪಾಯಿ ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಭರವಸೆ ಕೊಟ್ಟರು.
ಇಲ್ಲಿನ ಬಿಕೆಡಿಬಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ತೃತೀಯ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬಸವಕಲ್ಯಾಣದ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಈಗಾಗಲೇ 60 ಕೋಟಿ ಖರ್ಚು ಮಾಡಲಾಗಿದೆ. ಮುಂದೆ ಈ ಸ್ಥಳ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಲು ಏನೆಲ್ಲ ಸೌಲಭ್ಯಗಳು ಬೇಕೋ ಅವೆಲ್ಲವನ್ನು ಹಂತಹಂತವಾಗಿ ಒದಗಿಸಲಾಗುವುದು ಎಂದರು. ಬಸವ ಉತ್ಸವಕ್ಕೆ ರೂ. 50 ಲಕ್ಷ ಬದಲಾಗಿ 1 ಕೋಟಿ ಕೊಡಲಾಗುವುದು ಎಂದೂ ಹೇಳಿದರು.

ಈ ವರ್ಷ ಬಸವಜಯಂತಿಯ ಶತಮಾನೋತ್ಸವ ಇರುವುದರಿಂದ ಈ ಉತ್ಸವವನ್ನು ನಾಡಿನಾದ್ಯಂತ ಸರ್ಕಾರದಿಂದಲೇ ಆಚರಿಸಬೇಕು ಎಂಬ ಕೆಲ ಶಾಸಕರ ಬೇಡಿಕೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಯೋಚಿಸೋಣ ಎಂದರು.

ಮಂಡಳಿ ವಿಶೇಷಾಧಿಕಾರಿಗಳನ್ನಾಗಿ ಡಾ.ಎಸ್.ಎಂ.ಜಾಮದಾರ ಅವರನ್ನೇ ಮುಂದುವರೆಸಬೇಕು ಎಂದೂ ಕೆಲವರು ಆಗ್ರಹಿಸಿದ್ದರಿಂದ ಈ ಬಗ್ಗೆ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಂಡಳಿ ಕಾಮಗಾರಿ ಬಗ್ಗೆ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಮಾಹಿತಿ ಕೊಟ್ಟರು. ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಹುಮನಾಬಾದ್, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಬೆಲ್ದಾಳ ಸಿದ್ಧರಾಮ ಶರಣರು, ಅನುಭವ ಮಂಟಪ ಕಾರ್ಯದರ್ಶಿ ವೈಜನಾಥ ಕಾಮಶೆಟ್ಟಿ ಮಾತನಾಡಿ ಮಂಡಳಿಗೆ ಹೆಚ್ಚಿನ ಹಣ ಒದಗಿಸಲು ವಿನಂತಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ, ಶಾಸಕರಾದ ಬಂಡೆಪ್ಪ ಕಾಶೆಂಪುರ, ರಹೀಮಖಾನ್, ಪ್ರಭು ಚವ್ಹಾಣ, ಹಾರಕೂಡ ಚೆನ್ನವೀರ ಶಿವಾಚಾರ್ಯರು, ವಿಧಾನಪರಿಷತ್ ಸದಸ್ಯ ಶಶೀಲ ನಮೋಶಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ ಕಾರಬಾರಿ, ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಡಾ.ನೀಲಾಂಬಿಕಾ ಶೇರಿಕಾರ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲ ರಗಟೆ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.