ADVERTISEMENT

ಶಿಕ್ಷಕರ ಮೇಲೆ ಹಲ್ಲೆ: ಸಂಘದ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 10:50 IST
Last Updated 12 ಮಾರ್ಚ್ 2011, 10:50 IST

ಭಾಲ್ಕಿ: ಫಲಿತಾಂಶದ ಹೆಚ್ಚಳಕ್ಕಾಗಿ ಎಲ್ಲೆಡೆ ವಿಶೇಷ ತರಗತಿಗಳು ನಡೆಸಲಾಗುತ್ತಿದೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಕುಡಿದು ಶಾಲೆಯಲ್ಲಿ ಬಂದು ಗಲಾಟೆ ಮಾಡಿದ್ದಲ್ಲದೇ ಶಿಕ್ಷಕರನ್ನು ಥಳಿಸಿದ ಘಟನೆ ಸೋಮವಾರ ಸಂಜೆ ಲಾಧಾದಲ್ಲಿ ನಡೆದಿದೆ.ಲಾಧಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಬಬನ್ ತಂದೆ ಬಸವಂತರಾವ ಬಿರಾದಾರ ಹಲ್ಲೆಗೊಳಗಾದವರು. ಸಾಯಂಕಾಲ 5ಗಂಟೆಗೆ ಶಾಲಾ ಆವರಣ ಪ್ರವೇಶಿಸಿದ ಅದೇ ಊರಿನ ಪಂಚಶೀಲ ಮತ್ತು ಆತನ ಸಹೋದರ ಸುಧಾಕರ ಅವರು ಬಬನ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಬೈಕ್ ಮೇಲೆ ಕಲ್ಲು ಹಾಕಿದ್ದಾರೆ. ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಅಡುಗೆ ಸಹಾಯಕರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯನ್ನು ಹಾಕಲಾಗಿದೆ ಎಂದು ದೂರಲಾಗಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ, ಈ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂಘದ ಖಂಡನೆ: ಶಿಕ್ಷಕರ ಮೇಲಿನ ಹಲ್ಲೆಗೆ ಖಂಡಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕವು ಮಂಗಳವಾರ ದೂರು ನೀಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಹಸೀಲ್ದಾರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದೆ. ಸಂಘದ ಅಧ್ಯಕ್ಷ ಡಿ.ಡಿ. ಸಿಂಧೆ ಮಾತನಾಡಿ, ರಾತ್ರಿವೇಳೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಶಿಕ್ಷಕಿಯರಿಗೆ ಮತ್ತು ಮಕ್ಕಳಿಗೆ ಮುಜುಗರದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ ಎಂದು ದೂರಿದರು. ಶಿಕ್ಷಕರ ಮೇಲಿನ ಹಲ್ಲೆಗೆ ತೀವ್ರವಾಗಿ ಖಂಡಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು. ಕಾರ್ಯದರ್ಶಿ ಬಾಲಾಜಿ ಬಿ.ಕೆ, ದಿನಕರ್ ಸಾಯಗಾಂವಕರ್, ವಸಂತ ಗಾಯಕವಾಡ, ಸಂಜೀವಕುಮಾರ, ದತ್ತು ಕಾಟ್ಕರ್, ಗಿಬ್ಸನ್ ಕೋಟೆ, ಹಣಮಂತ ಕಾರಾಮುಂಗೆ, ಪಿ.ಎಸ್. ಬಿರಾದಾರ, ಎಸ್.ಎಸ್. ಘಂಟೆ, ದಲಿತ ಸಂಘಟನೆಗಳ ಪ್ರಮುಖರಾದ ರಾಜಭೂಷಣ ಭಾಟಸಾಂಗವಿ, ರಾಜಕುಮಾರ ಮೋರೆ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT