ADVERTISEMENT

ಸರ್ಕಾರದ ವೈಫಲ್ಯ ವಿರುದ್ಧ ಕಾಂಗ್ರೆಸ್ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:10 IST
Last Updated 11 ಫೆಬ್ರುವರಿ 2011, 7:10 IST

ಬೀದರ್: ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಜನಜಾಗೃತಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಗುಲ್ಬರ್ಗ ನಾಡರಕ್ಷಣಾ ರ್ಯಾಲಿಯ ಅಂಗವಾಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗಾಗಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಜನಪರ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಆಪಾದಿಸಿದರು.ಸರ್ಕಾರ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿ ಹೋಗಿದೆ. ಯಡಿಯೂರಪ್ಪ ಅವರ ವಿರುದ್ಧ ಅನೇಕ ಆರೋಪಗಳು ಬಂದರೂ ಕುರ್ಚಿ ಬಿಡುವುದಕ್ಕೆ ಸಿದ್ಧರಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಕೇಂದ್ರದ ಅನುದಾನದ ಮೇಲೆ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದರು.ಯಡಿಯೂರಪ್ಪ ಅವರ ಸರ್ಕಾರದ ಭ್ರಷ್ಠಾಚಾರದ ವಿರುದ್ಧ ಗುಲ್ಬರ್ಗ ಜಿಲ್ಲೆಯಲ್ಲಿ ಫೆಬ್ರುವರಿ 13 ರಂದು ನಾಡರಕ್ಷಣಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಎನ್. ಧರ್ಮಸಿಂಗ್ ಮನವಿ ಮಾಡಿದರು.

ಬಿಜೆಪಿಯಂಥ ಭ್ರಷ್ಟ ಸರ್ಕಾರದಿಂದ  ರಾಜ್ಯದ ಜನ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿದರು.ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ ಅಲಿ, ಮಾಜಿ ಸಂಸದ ನರ್ಸಿಂಗರಾವ ಸೂರ್ಯವಂಶಿ ಮಾತನಾಡಿದರು. ಮಾಜಿ ಶಾಸಕ ಗುಂಡಪ್ಪ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೀರಣ್ಣ ಕಾರಬಾರಿ ಗೋರಚಿಂಚೋಳಿ, ಮುರಳೀಧರರಾವ ಎಕಲಾರಕರ್, ಸಂಜಯ ಜಾಗಿರದಾರ್, ಶಂಕರರಾವ ದೊಡ್ಡಿ, ರತ್ನಾ ಕುಶನೂರ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ ಅರಳಿ ಸ್ವಾಗತಿಸಿದರೆ ರಾಜಶೇಖರ ಪಾಟೀಲ್ ಅಷ್ಟೂರ ವಂದಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.