ADVERTISEMENT

ಸರ್ವಧರ್ಮ ಸಮ್ಮೇಳನಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:10 IST
Last Updated 4 ಅಕ್ಟೋಬರ್ 2012, 5:10 IST

ಬೀದರ್: ನಗರದಲ್ಲಿ ಶುಕ್ರವಾರ (ಅ. 5) ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು ಸಾವಿರಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಮ್ಮೇಳನಕ್ಕೆ ಪೂರ್ಣ ಸಿದ್ಧತೆ ಮಾಡಲಾಗಿದೆ ಎಂದು ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಸಿದ್ಧಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಿ.ವಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ  ಸಮ್ಮೇಳನ ನಡೆಯಲಿದ್ದು, ಅತಿಥೇಯ ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಹುತೇಕ ಎಲ್ಲ ಮಠಾಧೀಶರು ಭಾಗವಹಿಸುವರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಸಮ್ಮುಖ ವಹಿಸುವರು ಎಂದು ವಿವರಿಸಿದರು.

ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರ ಜನ್ಮದಿನ ನಿಮಿತ್ತ ಕಾರ್ಯಕ್ರಮ ಆಯೋಜಿಸಿದ್ದು, ಇದರ ಜೊತೆಗೆ ಸಾಮೂಹಿಕ ವಿವಾಹವನ್ನೂ ಆಯೋಜಿಸಲಾಗಿದೆ. ಇದುವರೆಗೂ ಒಟ್ಟಾರೆ 40 ಜೋಡಿಗಳು ಸಾಮೂಹಿಕ ವಿವಾಹಕ್ಕಾಗಿ ಹೆಸರು ನೋಂದಾಯಿಸಿದ್ದು, ಇನ್ನು ಪ್ರವೇಶಗಳು ಬರುತ್ತಿವೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸಂಜಯ ಖೇಣಿ ತಿಳಿಸಿದರು.

ಪಾಪನಾಶ ದೇಗುಲ ಆವರಣದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ನವ ಜೋಡಿಗಳು ಮತ್ತು ಸರ್ವಧರ್ಮ ಮಠಾಧಿಪತಿಗಳ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸರ್ವಧರ್ಮ ಮಂಟಪಕ್ಕೆ ಆಗಮಿಸಲಿದೆ ಎಂದು ವಿವರಿಸಿದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಾಲಿವುಡ್ ಗಾಯಕ ಸೋನು ನಿಗಮ್ ಮತ್ತು ಚಿತ್ರ ನಟ, ನಟಿಯರು ಭಾಗವಹಿಸುವರು.

ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿವೆ ಎಂದರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಇತರ ಸ್ವಾಮೀಜಿಗಳು ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.