ADVERTISEMENT

ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ಕನಸು

ಪ್ರಚಾರ ಸಭೆ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:22 IST
Last Updated 7 ಮೇ 2018, 8:22 IST

ಬೀದರ್: ‘ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಇದೆ. ಸಿದ್ದರಾಮಯ್ಯ ಅಧಿಕಾರ ಅವಧಿ ಮುಗಿಯುವ ಹಂತದಲ್ಲಿದೆ. ಸಿದ್ದರಾಮಯ್ಯ ಅಷ್ಟೇ ಅಲ್ಲ, ರಾಹುಲ್‌ ಗಾಂಧಿ ಅವರೂ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜೆಡಿಎಸ್–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಅವರ ಅಪ್ಪನ ಆಣೆಗೂ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿದ್ದರಾಮಯ್ಯಲಘುವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಚುನಾವಣೆ ನಂತರ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ. ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಬಿಜೆಪಿಯಲ್ಲಿ ಗೊಂದಲ ಇದೆ. ಆದರೆ ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಬಿಎಸ್‌ಪಿ– ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರಾಮಕೃಷ್ಣ ಹೆಗಡೆ ಅವರಿಂದ ಈವರೆಗೆ ಜನತಾ ಪರಿವಾರ ರಾಜ್ಯದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮ ಯೋಜನೆ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ’ ಎಂದು ಹೇಳಿದರು.

‘ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಕುರಿತು ಎರಡು ವರ್ಷಗಳ ಹಿಂದೆಯೇ ಹೇಳಿಕೆ ನೀಡಿದ್ದಾರೆ. ಆದರೆ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಇವರೆಲ್ಲ ಈಗ ಸಾಲ ಮನ್ನಾ ಕುರಿತು ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬೀದರ್‌ ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದು ನಾನು. ಗೋದಾವರಿ ತಿರುವಿನಿಂದ 25 ಟಿಎಂಸಿ ಅಡಿ ನೀರು ಬರಲಿದೆ. ಅದನ್ನು ಬಳಸಿಕೊಂಡರೆ ಜಿಲ್ಲೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು’ ಎಂದು ಹೇಳಿದರು.

ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಮಾತನಾಡಿ, ‘ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳ ಆರ್ಥಿಕ ನೀತಿಗಳಿಂದ ದೇಶ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಕರ್ನಾಟಕದ ಜನತೆಗೆ ಉತ್ತಮ ಸರ್ಕಾರ ಕೊಡುವ ದಿಸೆಯಲ್ಲಿ ಬಿಎಸ್‌ಪಿ, ಜೆಡಿಎಸ್‌ಗೆ ಬೆಂಬಲ ನೀಡಿದೆ’ ಎಂದು ಅವರು ಹೇಳಿದರು.

‘ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ’ ಎಂದು ತಿಳಿಸಿದರು.

ಚುನಾವಣೆಯಲ್ಲಿ ಮೋದಿಗೆ ಸಮಸ್ಯೆಗಳು ಜ್ಞಾಪಕಕ್ಕೆ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಹದಾಯಿ, ಕಾವೇರಿ ಹಾಗೂ ರೈತರ ಸಮಸ್ಯೆಗಳು ಜ್ಞಾಪಕಕ್ಕೆ ಬರುತ್ತಿವೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಟೀಕಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜೆಡಿಎಸ್–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮಹದಾಯಿಯ 12 ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ಕೊಡಬೇಕು ಎಂದು ಕೇಳಿದ್ದೆ. ರೈತರ ಸಮಸ್ಯೆಗಳನ್ನೂ ಅವರ ಗಮನಕ್ಕೆ ತಂದಿದ್ದೆ. ಆದರೆ, ಮೋದಿ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದು ಆರೋಪಿಸಿದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್‌ ಅಲಿ, ರಾಜ್ಯ ಉಸ್ತುವಾರಿ ಅಶೋಕ ಸಿದ್ಧಾರ್ಥ್‌, ಬೀದರ್‌ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಮಾರಸಂದ್ರ ಮುನಿಯಪ್ಪ, ಜೆಡಿಎಸ್‌ನ ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿ ಪಿಜಿಆರ್‌ ಸಿಂಧ್ಯ, ಬೀದರ್‌ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಂಡೆಪ್ಪ ಕಾಶೆಂಪುರ, ಹುಮನಾಬಾದ್‌ ಕ್ಷೇತ್ರದ ಅಭ್ಯರ್ಥಿ ನಸಿಮೋದ್ದಿನ್‌ ಪಟೇಲ್, ಔರಾದ್‌ ಕ್ಷೇತ್ರದ ಅಭ್ಯರ್ಥಿ ಧನಾಜಿ ಜಾಧವ, ಭಾಲ್ಕಿ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಖಂಡ್ರೆ ಮಾತನಾಡಿದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಅಶೋಕಕುಮಾರ ಕರಂಜಿ ಇದ್ದರು.

ಎರಡೂವರೆ ತಾಸು ತಡವಾಗಿ ಆರಂಭವಾದ ಸಭೆ: ಜೆಡಿಎಸ್-ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಪ್ರಚಾರ ಸಭೆ ಎರಡೂವರೆ ತಾಸು ತಡವಾಗಿ ಆರಂಭವಾಯಿತು.

‘ಲಿಂಬು ಸೋಡಾ’ ಮೊರೆ ಹೋದ ಕಾರ್ಯಕರ್ತರು: ಬೀದರ್: ಜೆಡಿಎಸ್-ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಪ್ರಚಾರ ಸಭೆ ಸಂಜೆ ನಡೆದರೂ ಬಿಸಿ ಗಾಳಿ ಇದ್ದ ಕಾರಣ ಕಾರ್ಯಕರ್ತರು ‘ಲಿಂಬು ಸೋಡಾ‘ ಮೊರೆ ಹೋದರು.

ನೆಹರೂ ಕ್ರೀಡಾಂಗಣ ಬಳಿ ನಿಂತುಕೊಂಡಿದ್ದ ತಳ್ಳು ಗಾಡಿಗಳಲ್ಲಿ 10 ರೂಪಾಯಿ ಕೊಟ್ಟು ಒಂದು ಗ್ಲಾಸ್ ‘ಲಿಂಬು ಸೋಡಾ’ ಕುಡಿದರು.ಜೆಡಿಎಸ್-ಬಿಎಸ್‌ಪಿ ಧ್ವಜಗಳು ರಾರಾಜಿಸಿದವು.

**
ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಇಟ್ಟು  ರೈತರಿಗೆ ಉಚಿತವಾಗಿ ಬಳಸಲು ಅನುಕೂಲ ಮಾಡಿಕೊಡಲಿದೆ
– ರಮೇಶ ಪಾಟೀಲ ಸೋಲಪುರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.