ADVERTISEMENT

ಸಿಬ್ಬಂದಿಗೆ ನೀರು ಕುಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 6:10 IST
Last Updated 22 ಫೆಬ್ರುವರಿ 2012, 6:10 IST

ಬೀದರ್: ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾ ಜಾತ್ಯತೀತ ಜನತಾದಳ ಯುವ ಘಟಕದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ನೀರು ಕುಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ತಲೆ ಮೇಲೆ ಗಡಿಗೆ ಹೊತ್ತು ಜಿಲ್ಲಾ ಪಂಚಾಯಿತಿಗೆ ಆಗಮಿಸಿದ ಕಾರ್ಯಕರ್ತರು ವಿವಿಧ ವಿಭಾಗಗಳಿಗೆ ತೆರಳಿ ಲೋಟದಲ್ಲಿ ಸಿಬ್ಬಂದಿಗೆ ನೀರು ಕುಡಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಇರುವಾಗ ಇನ್ನು ಇಡೀ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಬಗೆಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಸಿಬ್ಬಂದಿ ತಮ್ಮ ಮನೆಯಿಂದ ನೀರು ತೆಗೆದುಕೊಂಡು ಬರುವಂತಾಗಿದೆ ಎಂದು ಆಪಾದಿಸಿದರು.

ಬರ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜನಸಾಮಾನ್ಯರು ಹಾಗೂ ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಮೀಕ್ಷೆ ನಡೆಸಬೇಕು. ಸಮಸ್ಯಾತ್ಮಕ ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಯುವ ಜನತಾದಳದ ಜಿಲ್ಲಾ ಅಧ್ಯಕ್ಷ ಗೋವರ್ಧನ್ ರಾಠೋಡ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಪ್ರಮುಖರಾದ ಅಶೋಕ ಕೊಡಗೆ, ಸುಭಾಷ ಮೆಟಗೆ, ವಿಜಯಕುಮಾರ ಆನಂದೆ, ಮನೋಜಕುಮಾರ ಪಾಂಡ್ರೆ ಜನವಾಡ, ಅಶೋಕ ಕೊಡಗೆ, ಶಿವರಾಜ ಬಂಬಳಗಿ, ಮುಜಾಸಾನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.