ಔರಾದ್: ಕಳೆದ ಎರಡು ವಾರಗಳಿಂದ ಇಲ್ಲಿ ಅಡುಗೆ ಅನಿಲ ಪೂರೈಕೆ ನಿಂತು ಹೋದ ಪರಿಣಾಮ ಆಕ್ರೋಶಗೊಂಡ ಗ್ರಾಹಕರು ಗುರುವಾರ ಸಿಲಿಂಡರ್ ಹೊತ್ತು ಬಂದ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ರಹಿತವಾಗಿ ರೂ. 950 ಖರೀದಿಸುವಂತೆ ಹೇಳಿದಾಗ ಸಿಡಿಮಿಡಿಗೊಂಡ ಗ್ರಾಹಕರು ವಿತರಕನಿಗೆ ಘೇರಾವ್ ಹಾಕಿದರು. ನಿಯಮಾನುಸಾರವಾಗಿ ಸಬ್ಸಿಡಿ ಸಹಿತ ರೂ. 450ಕ್ಕೆ ಕೊಡುವಂತೆ ಪಟ್ಟು ಹಿಡಿದರು. ಇಲ್ಲಿಯ ಗೌರಿ ಏಜೆನ್ಸಿ ಪೂರೈಕೆ ನಿಲ್ಲಿಸಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲೆಂದು ಭಾಲ್ಕಿಯಿಂದ ತಂದಿದ್ದೇವೆ. ಬೇಕಾದರೆ ನಿಮಗೆ ರೂ. 950 ರಸೀದಿ ಕೊಡುತ್ತೇವೆ ಎಂದು ವಿತರಕ ಹೇಳಿದರೂ ಗ್ರಾಹಕರು ಕೇಳಲಿಲ್ಲ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಕುಮಾರ ಶೀಲವಂತ ಯಾರ ಅನುಮತಿ ಪಡೆದು ನೀವು ಇಲ್ಲಿಗೆ ಸಿಲಿಂಡರ್ ತಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಕಂಪೆನಿ ನಿಯಮಾನುಸಾರ ಸಿಲಿಂಡರ್ ಪೂರೈಸಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಲೀಕತ್ವ ವಿವಾದದಿಂದ ಗ್ರಾಹಕರಿಗೆ ತೊಂದರೆ ಮಾಡಲಾಗುತ್ತಿದೆ. ಇರುವ ಎಜೆನ್ಸಿ ರದ್ದು ಮಾಡಿ ಬೇರೊಬ್ಬರಿಗೆ ವಿತರಿಸಲು ಅವಕಾಶ ನೀಡುವಂತೆ ಕೆಲವರು ಆಗ್ರಹಿಸಿದರು
.
ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ ಶೀಲವಂತ ಭರವಸೆ ನೀಡಿದರು.
ದೂರು: ನಾನು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಒಂದು ತಿಂಗಳಾಗಿದೆ. ಆದರೆ ಕೇಳಲು ಹೋದರೆ ಅಂಗಡಿಗೆ ಬೀಗ ಬಿದ್ದಿರುತ್ತದೆ. ಹೀಗಾದರೆ ಜನಸಾಮಾನ್ಯರು ಏನು ಮಾಡಬೇಕು ಎಂದು ಸಮಾಜ ಕಾರ್ಯಕರ್ತ ಗುರುನಾಥ ವಡ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಏಜೆನ್ಸಿ ಅಮಾನತಿನಲ್ಲಿ ಇಟ್ಟು ಸರ್ಕಾರವೇ ಅಡುಗೆ ಅನಿಲ ಪೂರೈಕೆ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಹಕರ ಅಕ್ಕುಚ್ಯುತಿ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ಖಟ್ಲೆ ಹೂಡಲಾಗುವುದು ಎಂದು ಎಚ್ಚರಿಸಿದರು. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.