ADVERTISEMENT

ಸೇತುವೆ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 6:00 IST
Last Updated 9 ಜುಲೈ 2012, 6:00 IST

ಬಸವಕಲ್ಯಾಣ: ತಾಲ್ಲೂಕಿನ ಚುಳಕಿನಾಲಾ ಜಲಾಶಯದ ಹಿನ್ನೀರಿನಲ್ಲಿ ಬರುವ ಧನ್ನೂರ ಹತ್ತಿರದ ರಸ್ತೆಯಲ್ಲಿ ಎತ್ತರದ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರ ಮುಂದಾಗಿದ್ದು ಭಾನುವಾರ ಯಂತ್ರದಿಂದ ರಂದ್ರ ಕೊರೆದು ಜಮೀನಿನಲ್ಲಿ ಎಷ್ಟು ಆಳದವರೆಗೆ ತಳಪಾಯ ಹಾಕಬೇಕಾಗುತ್ತದೆ ಎಂಬುದನ್ನು ಪರೀಕ್ಷಿಸಲಾಯಿತು.

ಈ ಸೇತುವೆಯು ಬಹಳಷ್ಟು ಚಿಕ್ಕದಾಗಿದ್ದರಿಂದ ಮಳೆಗಾಲದಲ್ಲಿ ಮೇಲಿನಿಂದ ನೀರು ಹರಿದು ವಾಹನ ಸಂಚಾರ ನಿಂತು ಹೋಗುತ್ತಿದೆ. ಹೀಗಾಗಿ ಭಾಲ್ಕಿ ಮತ್ತು ಬೀದರಗೆ ಹೋಗುವ ಪ್ರಯಾಣಿಕರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿದೆ. ಅಲ್ಲದೆ ಸೇತುವೆ ಹಳೆಯದಾಗಿದ್ದರಿಂದ ಯಾವಾಗ ಏನಾಗುತ್ತದೋ ಎಂದು ಜನರು ಭಯಪಡುವಂತಾಗಿದೆ. ತಡೆಗೋಡೆಯೂ ಇಲ್ಲದ್ದರಿಂದ ಅಪಾಯಕ್ಕೆ ಆಹ್ವಾನ ಕೊಡುವಂತಿದೆ.

ಆದ್ದರಿಂದ ಸೇತುವೆಯನ್ನು ಎತ್ತರಿಸಬೇಕು. ಎರಡೂ ಕಡೆ ತಡೆಗೋಡೆಯಾದರೂ ನಿರ್ಮಿಸಬೇಕು ಎಂದು ಈ ಭಾಗದ ಗ್ರಾಮಗಳ ಜನರು ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಈ ಬಗ್ಗೆ `ಪ್ರಜಾವಾಣಿ~ ಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಸಲ ವಿಶೇಷ ವರದಿ ಸಹ ಪ್ರಕಟಿಸಲಾಗಿದೆ. ಆದ್ದರಿಂದ ಎಚ್ಚೆತ್ತ ಸಂಬಂಧಿತ ಇಲಾಖೆಯವರು ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಪ್ರಥಮವಾಗಿ ನಾಲೆಯಲ್ಲಿನ ಮಣ್ಣಿನ ಆಳದ ಬಗ್ಗೆ ಪರೀಕ್ಷೆ ನಡೆಸಿದ ನಂತರ ಹೊಸದಾಗಿ ಕಟ್ಟಲಾಗುವ ಸೇತುವೆಯ ಆಕಾರ, ಎತ್ತರ ಮತ್ತು ಅದಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ಧಪಡಿಸಿ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಲಾಗುತ್ತದೆ. ನಂತರ ಅವರು ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತಾರೆ ಎಂದು ಯೋಜನಾ ವರದಿ ಸಿದ್ಧಪಡಿಸಲು ಗುತ್ತಿಗೆ ಪಡೆದಿರುವ ಮುಂಬೈನ ಆಕಾರ ಅಭಿನವ ಕನ್ಸಲ್ಟಂಟ್ ಕಂಪೆನಿಯ ಎಂಜಿನಿಯರ್ ಕಿರಣ ಮೇನೆಗಾರ್ ತಿಳಿಸಿದ್ದಾರೆ.

ಒಟ್ಟು 54 ಮೀಟರ್ ಉದ್ದದ ಸೇತುವೆ ನಿರ್ಮಿಸಲು ಯೋಜನೆ ತಯಾರಿಸಲಾಗುತ್ತಿದೆ. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಒಂದು ವಾರದಲ್ಲಿ ಈ ಕುರಿತು ಸಂಪೂರ್ಣ ವರದಿ ಸಲ್ಲಿಸಲಾಗುತ್ತದೆ. ಒಂದೆರಡು ತಿಂಗಳಲ್ಲಿ ಸೇತುವೆಯ ಕಾಮಗಾರಿ ಆರಂಭಗೊಳ್ಳುತ್ತದೆ. ಜತೆಗೆ ಕೆಆರ್‌ಡಿಸಿಎಲ್‌ನಿಂದ ಬಸವಕಲ್ಯಾಣದಿಂದ ಭಾಲ್ಕಿವರೆಗೆ ಹೋಗುವ ಈ ರಸ್ತೆಯ ಅಗಲೀಕರಣ ಕೆಲಸ ಸಹ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.