ADVERTISEMENT

ಸೇಬು ದರ ಅಗ್ಗ: ಆದರೂ, ಬೇಡಿಕೆ ಮಾತ್ರ ಕ್ಷೀಣ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:01 IST
Last Updated 6 ಸೆಪ್ಟೆಂಬರ್ 2013, 6:01 IST

ಬೀದರ್: `ಬೆಲೆ ಕಡಿಮೆ. ಆದರೂ, ಕೊಳ್ಳುವವರೇ ಇಲ್ಲ'
   -ಇದು ಸೇಬು ವ್ಯಾಪಾರಿಗಳ ಅಳಲು. ಸೇಬು ಹಣ್ಣಿಗೆ ಸದ್ಯ ಸುಗ್ಗಿಯ ಕಾಲ. ನಗರದ ಪ್ರಮುಖ ಹಣ್ಣು ಅಂಗಡಿ, ಬಂಡಿಗಳಲ್ಲಿ ಸೇಬು ಹಣ್ಣುಗಳದ್ದೇ ಸಿಂಹಪಾಲು. ಅದಾಗಿಯೂ ಹೇಳಿಕೊಳ್ಳುವಂಥ ವ್ಯಾಪಾರ ಇಲ್ಲ.

ಈ ವರ್ಷ ಅರ್ಧಕ್ಕಿಂತ ಕಡಿಮೆಯಾಗಿದೆ. ಕಳೆದವರ್ಷ 1 ಕೆ.ಜಿ. ಸೇಬು ಬೆಲೆ 180 ರೂ. ಆಗಿದ್ದರೆ, ಈ ವರ್ಷ 70 ರೂ. ಆಗಿದೆ. ಇನ್ನು ಚೌಕಾಶಿ ಮಾಡಿದರೆ 60 ರೂಪಾಯಿಗೂ ಇಳಿಕೆ ಆಗುತ್ತಿದೆ.

ಕಳೆದ ಮೂರು- ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೇಬು ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಸುಗ್ಗಿಯ ಸೇಬು ತಿಂಗಳ ಹಿಂದೆ ಮಾರುಕಟ್ಟೆ ಪ್ರವೇಶಿಸಿದಾಗ ಬೆಲೆ ಕೆ.ಜಿ.ಗೆ ರೂ 140 ಇತ್ತು. ಬಳಿಕ 120 ಆಯಿತು. ಈಗ 60-70 ರೂಪಾಯಿಗೆ ಬಂದು ನಿಂತಿದೆ ಎಂದು ತಿಳಿಸುತ್ತಾರೆ ವ್ಯಾಪಾರಿ ಮಹಮ್ಮದ್ ಬಾಬುಮಿಯ್ಯ.

ಸುಗ್ಗಿಯ ಮೊದಲ ಎರಡು ವಾರ ಬೆಲೆ ಜಾಸ್ತಿಯಾಗಿದ್ದರೂ ವ್ಯಾಪಾರ ಉತ್ತಮವಾಗಿತ್ತು. ಆದರೆ, ಕಳೆದ ಎರಡು ವಾರಗಳಲ್ಲಿ ಬೆಲೆ ಕಡಿಮೆಯಾಗಿದ್ದರೂ ವ್ಯಾಪಾರವೇ ಇಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರದ ಪ್ರಮಾಣ ಶೇ 25ರಷ್ಟು ಮಾತ್ರ ಇದೆ ಎಂದು ಬೇಸರದಿಂದ ನುಡಿಯುತ್ತಾರೆ.

ಹಿಮಾಚಲ ಪ್ರದೇಶ, ಶಿಮ್ಲಾದಿಂದ ಸೇಬು ಆಮದು ಆಗುತ್ತದೆ. ಬಾಳೆ ಹಣ್ಣು ಉತ್ಪಾದನೆ ಕಡಿಮೆ ಮತ್ತು ಬೆಲೆ ಜಾಸ್ತಿ ಆಗಿದ್ದರಿಂದ ಹೆಚ್ಚು ವ್ಯಾಪಾರಿಗಳು ಸೇಬಿನತ್ತ ಹೊರಳಿದ್ದಾರೆ. ಸೇಬು ಉತ್ಪಾದನೆ ಹೆಚ್ಚಾಗಿ ಬೆಲೆ ಕಡಿಮೆ ಆಗಿದೆ. ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದ್ದರೂ ಗ್ರಾಹಕರು ಮಾತ್ರ ಸುಳಿಯುತ್ತಿಲ್ಲ ಎಂಬ ಅಳಲು ಅವರದು. ದೊಡ್ಡ ಸೇಬು ಹಣ್ಣು 16-20 ರೂಪಾಯಿ ಮತ್ತು ಸಣ್ಣ ಗಾತ್ರದ ಸೇಬು 8 ರೂಪಾಯಿಗೆ ಒಂದರಂತೆ ಮಾರಾಟವಾಗುತ್ತಿದೆ. ಇದು, ಚಹಾ ದರಕ್ಕಿಂತ ಕಡಿಮೆಯಾಗಿದೆ ಎನ್ನುತ್ತಾರೆ ಅವರು. 

ಸೇಬು ದರ ಕಡಿಮೆ ಆಗಿರುವುದು ಖುಷಿ ತಂದಿದೆ. ಶ್ರೀಮಂತರಿಗಷ್ಟೇ ಸೀಮಿತ ಎನಿಸಿದ್ದ ಈ ಹಣ್ಣನ್ನು ಈಗ ಬಡವರು ಸಹ ಖರೀದಿಸಬಹುದು ಎಂದು ಹೇಳುತ್ತಾರೆ ಗ್ರಾಹಕ ಪಂಢರಿ.

ಅತಿವೃಷ್ಟಿಯಿಂದ ಕೆಲವೆಡೆ ಬೆಳೆ ಹಾನಿಯಾಗಿದ್ದರೆ, ಇನ್ನು ಕೆಲವು ಕಡೆ ಕೃಷಿಯೇ ಆಗಿಲ್ಲ. ಹೀಗಾಗಿ ಜನರ ಕೈಯಲ್ಲಿ ಹಣ ಇಲ್ಲ ಎನ್ನುತ್ತಾರೆ ಮತ್ತೊಬ್ಬ ಗ್ರಾಹಕ ಸುಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.