ADVERTISEMENT

ಸೋಮಾರಿತನದಿಂದ ಬಡತನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 7:25 IST
Last Updated 6 ಅಕ್ಟೋಬರ್ 2012, 7:25 IST

ಬಸವಕಲ್ಯಾಣ: ಯಾವುದೇ ಕೆಲಸ ಮಾಡದೆ ಸೋಮಾರಿ ಆಗಿದ್ದರೆ ಮತ್ತು ದುಶ್ಚಟಗಳ ದಾಸರಾದರೆ ಬಡತನ ಹಿಂಬಾಲಿಸುತ್ತದೆ ಎಂದು ಮಾಜಿ ಸಚಿವರು ಮತ್ತು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಗುರುಪಾದಪ್ಪ ನಾಗಮಾರಪಳ್ಳಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೋಬಳಿ ಕೇಂದ್ರ ರಾಜೇಶ್ವರದಲ್ಲಿ ಮಂಗಳವಾರ ಹಮ್ಮಿಕೊಂಡ ಡಿಸಿಸಿ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಆದ್ದರಿಂದ ಕಾಯಕ ಮಾಡುತ್ತಿರಬೇಕು. ಹೊಸ ಹೊಸ ಕೆಲಸ ಕಲಿತುಕೊಳ್ಳಬೇಕು. ಗಳಿಸಿರುವುದನ್ನು ಉಳಿತಾಯ ಮಾಡಬೇಕು ಎಂದರು. ಡಿಸಿಸಿ ಬ್ಯಾಂಕ್‌ನಿಂದ ಜಿಲ್ಲೆಯಲ್ಲಿ ಶೇ 80 ರಷ್ಟು ಕೃಷಿ ಸಾಲ ವಿತರಿಸಲಾಗಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೈಗೊಳ್ಳಲು ಸಾಲ ಕೊಡಲಾಗುತ್ತಿದೆ. ಸ್ವಸಹಾಯ ಸಂಘಗಳಿಗೆ ನಿಧಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್ ಮಾತನಾಡಿ ಡಿಸಿಸಿ ಬ್ಯಾಂಕ್‌ನಿಂದ ಮತ್ತು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಲಾಭವಾಗಿದೆ ಎಂದರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಬಸವಕಲ್ಯಾಣ ತಾಲ್ಲೂಕಿನ ಗ್ರಾಮಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು.

ಮಾಜಿ ಶಾಸಕರಾದ ಎಂ.ಜಿ.ಮುಳೆ, ನಾರಾಯಣರಾವ ಮನ್ನಳ್ಳಿ, ರಾಚಪ್ಪ ಪಾಟೀಲ, ಸಂಗ್ರಾಮಪ್ಪ ಸಿಂದಬಂದಗಿ, ವಿಜಯಕುಮಾರ ಕಣಜಿ, ಶರಣಪ್ಪ ಗೋಟೂರ್, ಮಹ್ಮದ್ ಹಾರೂನ್, ಮಲ್ಲಿಕಾರ್ಜುನ ಮಹಾಜನ, ನಿಜಪ್ಪ ಪತ್ರಿ, ಚೆನ್ನಬಸಯ್ಯ ಸ್ವಾಮಿ, ನಾರಾಯಣರೆಡ್ಡಿ, ಕಾಶಪ್ಪ ಬೀರಗೆ, ಸಂಜಯಸಿಂಗ್ ಹಜಾರಿ ಉಪಸ್ಥಿತರಿದ್ದರು.

ವ್ಯವಸ್ಥಾಪಕ ಚೆನ್ನಶೆಟ್ಟಿ ಸ್ವಾಗತಿಸಿದರು. ಕರಣಕುಮಾರ ಚಂದನ್ ನಿರೂಪಿಸಿದರು. ಗೋವಿಂದ ಕುಲಕರ್ಣಿ ವಂದಿಸಿದರು.

ವಿತರಣೆ: ತಾಲ್ಲೂಕಿನ ರಾಜೋಳದಲ್ಲಿ ಮಂಗಳವಾರ ಹೈನುಗಾರಿಕೆ ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿಯವರು 10 ಜನರಿಗೆ ಒಟ್ಟು 12.50 ಲಕ್ಷ ರೂಪಾಯಿಗಳ ಚೆಕ್‌ನ್ನು ವಿತರಿಸಿದರು. ಶಾಸಕ ರಾಜಶೇಖರ ಪಾಟೀಲ, ನಾರಾಯಣರಾವ ಮನ್ನಳ್ಳಿ, ಪೆಂಟಾರಡ್ಡಿ, ಕಿಶನರಾವ ಪಾಟೀಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ನಡೆಸುತ್ತಿರುವ ಗ್ರಾಮದ ಹಾಲಿನ ಡೇರಿ ಯುನಿಟ್‌ಗೂ ನಾಗಮಾರಪಳ್ಳಿ ಭೇಟಿ ಕೊಟ್ಟು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.