ADVERTISEMENT

ಸೋಯಾಗೆ ನಿಗದಿಯಾಗದ ಬೆಂಬಲ ಬೆಲೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 5:38 IST
Last Updated 21 ಅಕ್ಟೋಬರ್ 2017, 5:38 IST
ಔರಾದ್ ತಾಲ್ಲೂಕಿನ ಅಲ್ಲಾಪುರ ರೈತ ಹಣಮಂತ ಸೋಯಾ ರಾಶಿಯಲ್ಲಿ ತೊಡಗಿರುವುದು
ಔರಾದ್ ತಾಲ್ಲೂಕಿನ ಅಲ್ಲಾಪುರ ರೈತ ಹಣಮಂತ ಸೋಯಾ ರಾಶಿಯಲ್ಲಿ ತೊಡಗಿರುವುದು   

ಔರಾದ್: ಸೋಯಾಗೆ ಬೆಂಬಲ ಬೆಲೆ ನಿಗದಿಯಾಗದೆ ತಾಲ್ಲೂಕಿನ ಬಹುತೇಕ ರೈತರು ತೀವ್ರ ತೊಂದರೆಯಲ್ಲಿ ಸಿಲುಕಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಸೋಯಾ ಬೆಳೆ ಬೆಳೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಸೋಯಾ ಬೆಲೆ ಕುಸಿದ ಪರಿಣಾಮ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಕ್ವಿಂಟಲ್ ಸೋಯಾ ₹ 3 ಸಾವಿರ ರಿಂದ ₹ 3,500 ವರೆಗೆ ಮಾರಾಟವಾಗಿದೆ. ಆದರೆ ಈ ವರ್ಷ ₹ 1,800 ರಿಂದ 2,600 ವರೆಗೆ ಮಾರಾಟವಾಗುತ್ತಿದೆ.
‘ತಾಲ್ಲೂಕಿನಲ್ಲಿ ಬಿತ್ತನೆಯಾದ 80 ಸಾವಿರ ಹೆಕ್ಟೇರ್ ಪೈಕಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತನೆಯಾಗಿದೆ.

ಸುಮಾರು 8 ಲಕ್ಷ ಕ್ವಿಂಟಲ್ ಇಳುವರಿ ಬರುವ ಸಾಧ್ಯತೆ ಇದೆ. ರೈತರು ಸಂಕಷ್ಟಗಳ ನಡುವೆ ಬೆವರು ಸುರಿಸಿ ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಈಗಿನ ಮಾರುಕಟ್ಟೆ ಬೆಲೆ ನೋಡಿದರೆ ರೈತರು ಖರ್ಚು ಮಾಡಿದ್ದು ವಾಪಸ್ ಬರುವ ಸಾಧ್ಯತೆ ಕಡಿಮೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಎಪಿಎಂಸಿ ಮಾಜಿ ಸದಸ್ಯ ಗೋವಿಂದ ಇಂಗಳೆ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ನಿಗದಿಯಾಗದ ಬೆಂಬಲ ಬೆಲೆ: ‘ಸರ್ಕಾರ ಉದ್ದು ಮತ್ತು ಹೆಸರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಸೋಯಾಗೆ ಇನ್ನು ದರ ನಿಗದಿಯಾಗಿಲ್ಲ’ ಎಂದು ಸಹಾಯಕ ಕೃಷಿ ನಿರ್ದೆಶಕ ಸಂಜುಕುಮಾರ ಮಾನಕರಿ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಸೋಯಾ ಬಿತ್ತನೆ ಕ್ಷೇತ್ರ ಜಾಸ್ತಿ ಇರುವುದರಿಂದ ಬೆಂಬಲ ಬೆಲೆ ನಿಗದಿಯಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಅವರು ಹೇಳಿದ್ದಾರೆ.
‘ಸೋಯಾಗೆ ಶೀಘ್ರ ಬೆಂಬಲ ಬೆಲೆ ಘೋಷಣೆ ಮಾಡಿ ತಾಲ್ಲೂಕು ಕೇಂದ್ರ ಸೇರಿದಂತೆ ಎಲ್ಲ ಹೋಬಳಿ ಕೇಂದ್ರದಲ್ಲೂ ಖರೀದಿ ಕೇಂದ್ರ ಸ್ಥಾಪಿಸಬೇಕು’ ಎಂದು ರೈತ ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.