ADVERTISEMENT

ಸ್ಮಾರಕ ನಿರ್ಮಾಣವಾಗಲಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 7:30 IST
Last Updated 11 ಸೆಪ್ಟೆಂಬರ್ 2011, 7:30 IST

ಬಸವಕಲ್ಯಾಣ: ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ದಿನ ಸೆಪ್ಟೆಂಬರ್ 17 ರಂದು ಮುಖ್ಯಮಂತ್ರಿಯವರು ಬೀದರನಲ್ಲಿ ಧ್ವಜಾರೋಹಣ ನೆರವೆರಿಸಬೇಕು. ವಿಮೋಚನಾ ಚಳವಳಿಯಲ್ಲಿ ನೂರಾರು ಜನರು ಹತರಾದ ಗೋರಟಾ ಗ್ರಾಮದಲ್ಲಿ ಸರ್ಕಾರದಿಂದ ಸ್ಮಾರಕ ನಿರ್ಮಿಸಬೇಕು ಎಂದು ಗೋರಟಾ ಹುತಾತ್ಮ ಸ್ಮಾರಕ ಹೋರಾಟ ಸಮಿತಿ ಅಧ್ಯಕ್ಷ ಡಾ.ರಾಜಶೇಖರ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಿಜಾಮ ಆಡಳಿತದಿಂದ ಮತ್ತು ರಜಾಕಾರರ ಹಾವಳಿಯಿಂದ ಮುಕ್ತಿ ಪಡೆಯುವುದಕ್ಕಾಗಿ ಈ ಭಾಗದ ಬೀದರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಜನರು ಹೋರಾಟ ಮಾಡಿದ್ದಾರೆ. ಆದರೆ ವಿಭಾಗೀಯ ಕೇಂದ್ರವೆಂದು ಮುಖ್ಯಮಂತ್ರಿಯವರು ಬರೀ ಗುಲ್ಬರ್ಗದಲ್ಲಿ ಪ್ರತಿಸಲ ಧ್ವಜಾರೋಹಣ ನಡೆಸುವುದು ಸರಿಯಾಗಲಾರದು ಎಂದಿದ್ದಾರೆ.

ಒಂದೇ ಕಡೆಗೆ ಧ್ವಜಾರೋಹಣ ನಡೆಯದೆ ಪ್ರತಿವರ್ಷ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೆರಿಸಿದರೆ ಎಲ್ಲರಿಗೂ ಸಮಾನ ನ್ಯಾಯ ಕೊಟ್ಟಂತಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿ ಸದಾನಂದ ಗೌಡರು ಹೊಸ ಪರಂಪರೆಗೆ ನಾಂದಿ ಹಾಡಬೇಕು ಎಂದು ವಿನಂತಿಸಿದ್ದಾರೆ.

ಹಾಗೆ ನೋಡಿದರೆ, ಅಂದಿನ ಹೋರಾಟದಲ್ಲಿ ಹೆಚ್ಚು ಪ್ರಾಣಹಾನಿ ಸಂಭವಿಸಿದ ಗ್ರಾಮಗಳಲ್ಲಿ ಮುಖ್ಯಮಂತ್ರಿಯವರು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಚಳವಳಿಯಲ್ಲಿ 200 ಕ್ಕೂ ಹೆಚ್ಚಿನ ಜನರು ಹುತಾತ್ಮರಾದ ಈ ಭಾಗದ ಜಲಿಯನವಾಲಾ ಬಾಗ ಎಂದೇ ಇತಿಹಾಸದಲ್ಲಿ ದಾಖಲಾದ ಗೋರಟಾ ಗ್ರಾಮದಲ್ಲಿ ಭವ್ಯ ಸಮಾರಂಭ ನಡೆಸಿದರೆ ವಿಮೋಚನಾ ದಿನಾಚರಣೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋರಟಾ ಗ್ರಾಮದಲ್ಲಿ ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮೀನಮೇಷ ಏಣಿಸಬಾರದು ಎಂದೂ ಹೇಳಿದ್ದಾರೆ. ಅಧಿಕಾರಿ ವರ್ಗ, ಸಂಘ, ಸಂಸ್ಥೆಯವರು ವಿಮೋಚನಾ ದಿನಾಚರಣೆಯನ್ನು ಕಾಟಾಚಾರಕ್ಕೆ ಆಚರಿಸದೆ ಸಡಗರ, ಸಂಭ್ರಮದಿಂದ ಆಚರಿಸಬೇಕು ಎಂದೂ ರಾಜಶೇಖರ ಸ್ವಾಮೀಜಿ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.