ADVERTISEMENT

ಸ್ವಾರ್ಥ ಇಲ್ಲದ್ದು ನಿಜವಾದ ಸೇವೆ: ಕಲ್ಲೂರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 4:55 IST
Last Updated 17 ನವೆಂಬರ್ 2012, 4:55 IST

ಹುಮನಾಬಾದ್: ನಿಸ್ವಾರ್ಥ ಮನೋಭಾವದಿಂದ ಕೂಡಿದ್ದು ನಿಜವಾದ ಸೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಕಲ್ಲೂರ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರತಿಷ್ಠಿತ ಹಿರೇಮಠ ಸಂಸ್ಥಾನದ ಗಂಗಾಧರ ಸ್ವಾಮೀಜಿ ಪಟ್ಟಾಧಿಕಾರ ಹಿನ್ನೆಲೆಯಲ್ಲಿ ಶುಕ್ರವಾರ ಆರಂಭಗೊಂಡ `ಜಗದ್ಗುರು ರೇಣುಕಾವಿಜಯ~ ಪುರಾಣ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರಿಯರಿಲ್ಲದ ಮನೆ ಮನೆಯಲ್ಲ, ಗುರುವಿಲ್ಲದ ಮಠ ಮಠವಲ್ಲ ಎಂಬಂತೆ ಊರಿನಲ್ಲಿ ಇರುವ ಹಿರೇಮಠ ಸುಮಾರು ವರ್ಷಗಳಿಂದ ಪಟ್ಟಾಧಿಕಾರ ಹೊಂದಿದ ಗುರುವಿಲ್ಲದೇ ಭಣಗೊಡುತ್ತಿತ್ತು. ಪಟ್ಟಾಧಿಕಾರ ನಡೆಯಲಿರುವ ಸಂಬಂಧ  ಮಠಕ್ಕೆ ಮಾತ್ರ ಅಲ್ಲ, ಇಡೀ ಹುಮನಾಬಾದ್ ನಗರ ಜನತೆಯಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಪಾಟ್ಟಾಧಿಕಾರದ ಬಳಿಕ ಶ್ರೀಗಳು ಈ ಭಾಗದ ಭಕ್ತಾದಿಗಳಿಗೆ ಮಾರ್ಗದರ್ಶನ ನೀಡಿ, ಧರ್ಮಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕರೂ ಆಗಿರುವ ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ ಮಾತನಾಡಿ, ನಾಲ್ಕು ದಶಕ ಕಾಲ ಪಟ್ಟಾಧಿಕಾರ ಇಲ್ಲದೇ ಮಠವು ಭಣಗುಡುತ್ತಿತ್ತು. ಆದರೇ ವಿಳಂಬ ಆದರೂ ಚಿಂತೆ ಇಲ್ಲ ಪೀಠಕ್ಕೆ ಕ್ರೀಯಾಶೀಲ ಹಾಗೂ ವಿದ್ವಾಂಸರೂ ಆಗಿರುವ ಗಂಗಾಧರ ಸ್ವಾಮೀಜಿ ಪಾಟ್ಟಾಧಿಕಾರಕ್ಕೆ ಒಪ್ಪಿಕೊಂಡಿರುವುದು ನಗರದ ಜನತೆ ಸುದೈವ. ಈಗ ನಡೆಯುತ್ತಿರುವ ಐತಿಹಾಸಿಕ  ಕಾರ್ಯಕ್ರಮದ ಯಶಸ್ವಿಗೆ ಸಮಸ್ತ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ನೇತೃತ್ವ ವಹಿಸಿದ್ದ ಬಸವಕಲ್ಯಾಣ ಅಭಿನವ ಘನಲಿಂಗ ರುದ್ರಮುನಿ ಸ್ವಾಮೀಜಿ, ಗಂಗಾಧರ ಸ್ವಾಮೀಜಿ ಸಮಾಜಸೇವಾ ಗುಣವನ್ನು ಶ್ಲಾಘಿಸಿ, ಶ್ರೀಗಳಿಂದ ಈ ಭಾಗ ಸಕಲ ಸಮೃದ್ಧಗೊಳ್ಳಲಿ ಎಂದು ಹಾರೈಸಿದರು. ರಾಜೇಶ್ವರದ ಘನಲಿಂಗ ರುದ್ರಮುನಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಜಂಗಮ ಸಮಾಜದ ರಾಜ್ಯಾಧ್ಯಕ್ಷ ರಾಚಯ್ಯಸ್ವಾಮಿ ಧನಾಶ್ರೀಮಠ್ ಮೊದಲಾದವರು ವೇದಿಕೆಯಲ್ಲಿ ಇದ್ದರು.
ಹಾನಗಲ್‌ನ ಮಹಾರಾಜಪೇಟೆ ಪ್ರಭಯ್ಯ ಶಾಸ್ತ್ರಿಗಳು `ಜಗದ್ಗುರು ರೇಣುಕಾ ವಿಜಯ~ ಪುರಾಣ ನಡೆಸಿಕೊಟ್ಟರು.

ಸಂಗಯ್ಯಸ್ವಾಮಿ ಮತ್ತು ರಾಚಯ್ಯಸ್ವಾಮಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಮಾಶೆಟ್ಟಿ ಸ್ವಾಗತಿಸಿದರು.
ಪರಮೇಶ್ವರ ಆರ್ಯ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಕುಮಾರ ಕಾರಂಜಿ ನಿರೂಪಿಸಿದರು.
ಮಲ್ಲಿಕಾರ್ಜುನ ಎಂ.ಸೀಗಿ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.