ADVERTISEMENT

ಹವಾಮಾನ ಆಧಾರಿತ ಬೆಳೆವಿಮೆ ಜಾರಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:45 IST
Last Updated 14 ಜೂನ್ 2011, 9:45 IST

ಬೀದರ್: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆವಿಮೆ ಕೈಗೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ರೈತರು ಸ್ವಇಚ್ಛೆಯಿಂದ ಕನಿಷ್ಠ ಶೇ.50 ರಷ್ಟು ವಿಮಾ ಮೊತ್ತದಿಂದ ಗರಿಷ್ಠ ವಿಮಾ ಮೊತ್ತದವರೆಗೆ ವಿಮೆ ಮಾಡಿಸಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಈ ಎರಡರ ಪೈಕಿ ಒಂದನ್ನು ಸ್ವಇಚ್ಛೆಯಿಂದ ಆರಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಬೆಳೆವಿಮೆಗೆ ಔರಾದ್ ತಾಲ್ಲೂಕಿನ ಔರಾದ್, ಚಿಂತಾಕಿ, ದಾಬಕಾ, ಕಮಲನಗರ, ಸಂತಪುರ, ಠಾಣಾಕುಶನೂರ ಹೋಬಳಿಗಳು. ಬಸವಕಲ್ಯಾಣದಲ್ಲಿ ಬಸವಕಲ್ಯಾಣ ಹೋಬಳಿ, ಭಾಲ್ಕಿಯಲ್ಲಿ ಭಾಲ್ಕಿ ಹೋಬಳಿ, ಬೀದರ್‌ನಲ್ಲಿ ಬೀದರ ಉತ್ತರ ಮತ್ತು ದಕ್ಷಿಣದ ಹೋಬಳಿಗಳು, ಹುಮನಾಬಾದ್ ಹೋಬಳಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಧಿಸೂಚಿಸಿದ ಬೆಳೆಗಳು ಹಾಗೂ ರೈತರು ಪ್ರತಿ ಹೆಕ್ಟೇರ್‌ಗೆ ಕಟ್ಟಬೇಕಾದ ವಿಮಾ ಕಂತು ಇಂತಿವೆ. ಮಳೆ ಆಶ್ರಿತ ಬೆಳೆಗಳಾದ ಶೇಂಗಾ (ರೂ. 525), ಜೋಳ (ರೂ. 250), ತೊಗರಿ (ರೂ. 300), ಉದ್ದು( ರೂ. 200, ಹೆಸರು (ರೂ. 200), ಸೋಯಾಬಿನ್ (ರೂ. 525), ಸೂರ್ಯಕಾಂತಿ (ರೂ. 350), ಹತ್ತಿ (ರೂ. 720) ನಿಗದಿಪಡಿಸಲಾಗಿದೆ.

ಅಧಿಸೂಚಿತ ಹೋಬಳಿಗಳಲ್ಲಿ ಮಳೆಯ ಪ್ರಮಾಣವನ್ನು ಅಳೆಯಲು ಹೋಬಳಿ ಮಟ್ಟದಲ್ಲಿ ಅಳವಡಿಸಲಾದ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರವನ್ನು ಮತ್ತು ತಾಪಮಾನ, ಗಾಳಿಯ ವೇಗ, ಆರ್ದ್ರತೆ ಹಾಗೂ ಇತರ ಅಂಶಗಳನ್ನು ಅಳೆಯಲು ತಾಲ್ಲೂಕು ಕೇಂದ್ರಗಳಲ್ಲಿರುವ ಹವಾಮಾನ ಕೇಂದ್ರವನ್ನು ಉಪಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.

ಜೂನ್ 30 ರ ಒಳಗಾಗಿ ರೈತರು ಪಿಕೆಪಿಎಸ್ ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ತುಂಬಿ ವಿಮಾ ಕಂತು ಕಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.