ADVERTISEMENT

ಹುಮನಾಬಾದ್: ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 7:12 IST
Last Updated 20 ಡಿಸೆಂಬರ್ 2012, 7:12 IST

ಹುಮನಾಬಾದ್: ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ಆಗುವುದಕ್ಕಾಗಿ ಕಳೆದ 3ದಶಕಗಳಿಂದ ನಿರಂತರ ಹೋರಾಟ ನಡೆಸಿರುವ ಹೈಕ ಹೋರಾಟ ಸಮಿತಿ ಪ್ರಮುಖರು ಅಭಿನಂದನಾರ್ಹರು ಎಂದು ಶಾಸಕ ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಹೈಕ ಹೋರಾಟ ಸಮಿತಿ ತಾಲ್ಲೂಕು ಘಟಕ ಸ್ಥಳೀಯ ಥೇರ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಮಾಜಿ ಸಚಿವ ವೈಜಿನಾಥ ಪಾಟೀಲ, ದಿ.ವಿಶ್ವನಾಥರೆಡ್ಡಿ ಮುದ್ನಾಳ, ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಹಾಗೂ ಬೀದರ್ ಸಂಸದ ಎನ್. ಧರ್ಮಸಿಂಗ್ ಮಾತ್ರ ಅಲ್ಲದೇ ವಿಭಾಗ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹೋರಾಟ ಸಮಿತಿ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದು ಅವರು ತಿಳಿಸಿದರು. 

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ ಕಲಂ ತಿದ್ದುಪಡಿ ತರಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. 

ಮಸೂದೆ ಅಂಗೀಕರಿಸುವ ಮೂಲಕ ಈಗ ಅದನ್ನು ಸಾಕಾರಗೊಳಿಸಿದ್ದಾರೆ ಎಂದರು. ಈ ಎಲ್ಲದರ ಜೊತೆ ಮಸೂದೆ ತಿದ್ದುಪಡಿ ಸಂಬಂಧ ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಸ್ತ ಶಾಸಕ, ಸಂಸದರ ಪಕ್ಷಾತೀತ ನಿಯೋಗ ದೇಶದ ಪ್ರಧಾನಿ ಮನಮೋಹನಸಿಂಗ್ ಬಳಿ ತೆರಳಿ ಮನವಿ ಸಲ್ಲಿಸಿದ್ದನ್ನು ಶಾಸಕ ಪಾಟೀಲ  ಸ್ಮರಿಸಿದರು.

3ದಶಕಗಳ ಹೋರಾಟದ ಬಳಿಕ ಮಸೂದೆ ಅಂಗೀಕಾರಗೊಂಡಿದೆ. ಅದರಿಂದ ಈ ಭಾಗದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನಮಾನ, ಹುದ್ದೆ ಗಿಟ್ಟಿಸಿಕೊಳ್ಳಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಅಗಡಿ, ಶಟ್ಟರ್ ಸರ್ಕಾರ ಮಸೂದೆ ಅಂಗೀಕಾರ ಆಕ್ಷೇಪಿಸುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿತ್ತು. ಬಿಜೆಪಿ ರಾಷ್ಟ್ರೀಯ ಮುಖಂಡರ ಕಿವಿ ಮಾತಿಗೆ ಸ್ಪಂದಿಸಿ, ಸಕಾಲಕ್ಕೆ ನಿರ್ಧಾರ ಬದಲಿಸಿತು. ಒಟ್ಟಾರೆ ಹೋರಾಟ ಯಶಸ್ಸಿಯ ಹಿಂದೆ ಪಕ್ಷಾತೀತ ಹೇಳುವುದಾದರೇ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಸಲ್ಲುತ್ತದೆ ಎಂದರು.

ಹೋರಾಟ ಸಮಿತಿ ಉಪಾಧ್ಯಕ್ಷ ಮಾಣಿಕಪ್ಪ ಗಾದಾ, ಪ್ರಮುಖ ರಾಚಯ್ಯಸ್ವಾಮಿ ಧನಾಶ್ರೀಮಠ್ ಮಾತನಾಡಿ, ನಿರಂತರ ಹೋರಾಟ ಫಲವಾಗಿ ಈ ಭಾಗದ ಸಮಗ್ರ ಅಭಿವೃದ್ಧಿಗೊಳ್ಳುವ ಯೋಗ ಕೂಡಿಬಂದದ್ದು ಸಂತಸದ ಸಂಗತಿ ಎಂದು ಅವರು ತಿಳಿಸಿದರು.

ಹೋರಾಟ ಸಮಿತಿ ತಾಲ್ಲೂಕು ಸಂಚಾಲಕ ಶಾಂತವೀರ ಯಲಾಲ್, ಪುರಸಭೆಯ ಮಾಜಿ ಅಧ್ಯಕ್ಷ ಪ್ರಕಾಶ ಬತಲಿ ಹೋರಾಟ ಪರಿಯ ಕುರಿತು ವಿವರಿಸಿದರು. ಡಿ.ಆರ್.ಚಿದ್ರಿ, ನಾಗಣ್ಣ ಪಲ್ಲರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾನಪದ ಪರಿಷತ್ ಅಧ್ಯಕ್ಷ ಶರದ್ ನಾರಾಯಣಪೇಟಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.