ADVERTISEMENT

ಹುಮನಾಬಾದ್: ಮಿರುಗು ಔಷಧಿ ವಿತರಣೆ

ಶತಮಾನದಿಂದ ನೀಡುತ್ತಿರುವ ಜೋಗದನಕರ್‌ ಪರಿವಾರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:42 IST
Last Updated 9 ಜೂನ್ 2018, 9:42 IST

ಹುಮನಾಬಾದ್: ನಗರದ ಜೇರಪೇಟೆ ಜೋಗದನಕರ್‌ ಪರಿವಾರದಿಂದ ಶುಕ್ರವಾರ ‘ಮಿರುಗು’ ಔಷಧಿ ವಿತರಿಸಲಾಯಿತು. ಸಹಸ್ರಾರು ಜನ ಮಿರುಗು ಔಷಧ ಸೇವನೆ ಮಾಡಿದರು. ಪ್ರತಿ ವರ್ಷ ಜೂನ್‌ ಮೊದಲ ವಾರ ಔಷಧ ನೀಡಲಾಗುತ್ತದೆ. ಜೋಗದನಕರ್‌ ಪರಿವಾರ ಶತಮಾನದಿಂದ ಈ ಔಷಧ ನೀಡುತ್ತಿದೆ.

ಶೀತ ವಾತಾವರಣದಿಂದ ಬರುವ ಎಲ್ಲ ಕಾಯಿಲೆ ನಿಯಂತ್ರಣಕ್ಕೆ ಮಿರುಗು ಔಷಧಿ ರಾಮ ಬಾಣ. ಈ ಔಷಧಿ ಸೇವನೆ ಮಾಡುವುದರಿಂದ ಕೆಮ್ಮು, ದಮ್ಮು ಇತರೆ ಕಾಯಿಲೆಗಳು ಸಂಪೂರ್ಣ ಗುಣವಾಗುತ್ತವೆ ಎಂಬುದು ನಂಬಿಕೆ.

‘ಮಿರುಗು ಮಳೆ ಪ್ರವೇಶದ ದಿನ ಔಷಧಿ ಸೇವಿಸುವುದರಿಂದ ವರ್ಷವಿಡೀ ಶೀತ ಸಂಬಂಧಿತ ಯಾವುದೇ ಕಾಯಿಲೆ ಬರುವುದಿಲ್ಲ. ಇದನ್ನು ಡೋಕ್‌ ಜಾತಿಗೆ ಸೇರಿದ ಮೀನಿನಲ್ಲಿ ನೀಡಲಾಗುತ್ತದೆ. ಕಲಬುರ್ಗಿ ವಿಭಾಗ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಸಾವಿರಾರು ಜನ ಬಂದು ಔಷಧ ಸೇವಿಸಿದ್ದಾರೆ’ ಎಂದು ಝರಣಪ್ಪ ಜೋಗದನಕರ್‌ ಹೇಳಿದರು.

ADVERTISEMENT

ಮೀನಿನ ಕೊರತೆ: ಈ ಬಾರಿ ಮಳೆ ಸಕಾಲಕ್ಕೆ ಬಾರದೆ ಹಳ್ಳಗಳಲ್ಲಿ ನೀರು ಹರಿಯದ ಕಾರಣ ಪ್ರತಿ ವರ್ಷದಂತೆ ಈ ವರ್ಷ ನಿರೀಕ್ಷಿತ ಪ್ರಮಾಣದ ಮೀನು ಲಭ್ಯವಾಗಿಲ್ಲ. ಅಲ್ಲಲ್ಲಿ ಲಭ್ಯವಾದ ಅಲ್ಪಸ್ವಲ್ಪ ಮೀನುಗಳನ್ನು ತಂದು ಔಷಧಿ ನೀಡಲಾಗಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿ ಬೆಲೆಗೆ ಮೀನು ಮಾರಾಟವಾಗಿವೆ ಎಂದು ಔಷಧಿ ಸೇವನೆಗಾಗಿ ಬಂದಿದ್ದ ಸೋಮಶೇಖರ ಪಾಟೀಲ ತಿಳಿಸಿದರು.

ಮೀನಿನಲ್ಲಿ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಮತ್ತು ಮೀನಿನ ಕೊರತೆ ಕಾರಣ ಬಹುತೇಕ ಜನರಿಗೆ ಈ ಬಾರಿ ಮೀನು ರಹಿತ ಔಷಧಿ ನೀಡಿದ್ದು ವಿಶೇಷವಾಗಿತ್ತು. ವಿವಿಧ ರಾಜ್ಯಗಳಿಂದ ಔಷಧಿಗಾಗಿ ಒಂದು ದಿನ ಮುಂಚಿತವಾಗಿ ಬಂದ ಜನ ಇಲ್ಲಿನ ವೀರಭದ್ರೆಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು.

ನಮ್ಮ ಪರಿವಾರದಿಂದ ಮಿರುಗು ಪ್ರವೇಶಿಸುವ ಜೂನ್‌ ಮೊದಲ ವಾರದಲ್ಲಿ ಔಷಧ ನೀಡಲಾಗುತ್ತದೆ. ಇದರಿಂದ ಸಾಕಷ್ಟು ಜನರಿಂದ ಅನುಕೂಲವಾಗಿದೆ
- ಝರಣಪ್ಪ ಜೋಗದನಕರ್‌, ಹುಮನಾಬಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.