ADVERTISEMENT

‘ಬಾಂಧವ್ಯ ಗಟ್ಟಿಗೊಳಿಸಲು ಕ್ರೀಡೆ ಪೂರಕ’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 7:06 IST
Last Updated 19 ಡಿಸೆಂಬರ್ 2013, 7:06 IST

ಬೀದರ್:  ಜಿಲ್ಲೆಯ ಪೊಲೀಸ್‌ ಸಿಬ್ಬಂದಿಗಾಗಿ ಮೂರು ದಿನ ನಡೆದ ವಾರ್ಷಿಕ ಕ್ರೀಡಾಕೂಟ ಬುಧವಾರ ಸಮಾರೋಪಗೊಂಡಿದ್ದು, ಒತ್ತಡದ ಕಾರ್ಯ ಬದುಕಿನ ನಡುವೆ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮನರಂಜನೆ, ಆರಾಮದಾಯಕ ಅನುಭವವನ್ನು ಒದಗಿಸಿತು.

ಕೊನೆಯ ದಿನ ಪೊಲೀಸ್ ಅಧಿಕಾರಿಗಳು, ಪ್ರಮುಖರಿಗಾಗಿ ನಗುವ ಸ್ಪರ್ಧೆ, ಸಿಬ್ಬಂದಿಯ ಕುಟುಂಬ ಸದಸ್ಯರಿಗಾಗಿ ಮಡಕೆ ಒಡೆಯುವ ಸ್ಪರ್ಧೆ, ಮಾಧ್ಯಮ ಪ್ರತಿನಿಧಿಗಳಿಗಾಗಿ ಬಲೂನು ಊದಿ, ಒಡೆಯುವ ಸ್ಪರ್ಧೆಯನ್ನು ಆಯೋಜಿಸಿದ್ದು ಸಭಿಕರಿಗೆ ರಂಜನೆ ಒದಗಿಸಿತು.
ಜಿಲ್ಲೆಯ ಐದು ತಾಲ್ಲೂಕುಗಳಿಂದ ಒಟ್ಟು ಆರು ತಂಡಗಳು ಮೂರು ದಿನ ಕಾಲ ನಡೆದ ಆಟೋಟ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ವಿಜೇತರಿಗೆ  ಈಶಾನ್ಯ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಮಹಮ್ಮದ್ ವಜೀರ್ ಅಹಮ್ಮದ್‌ ಅವರು ಬಹುಮಾನ ವಿತರಿಸಿದರು.
‘ಪೊಲೀಸ್‌ ಸಿಬ್ಬಂದಿ ಕರ್ತವ್ಯದ ಜೊತೆಗೆ ಉತ್ತಮ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಒತ್ತು ನೀಡಬೇಕು’ ಎಂದು ಪ್ರಶಸ್ತಿ ವಿತರಿಸಿದ ವಜೀರ್ ಅಹಮ್ಮದ್ ಹೇಳಿದರು.

ಮೂರು ದಿನ ನಡೆದ ಈ ಕ್ರೀಡಾಕೂಟವು ಸಿಬ್ಬಂದಿ ಪರಸ್ಪರ ಮುಖಾಮುಖಿಯಾಗಲು, ಪರಸ್ಪರರ ನಡುವೆ ಬಾಂಧವ್ಯ ಗಟ್ಟಿಯಾಗಲು ನೆರವಾಗಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಂಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.