ADVERTISEMENT

ಔರಾದ್-ಬೀದರ್ ರಸ್ತೆ ದುರಸ್ತಿಗೆ ₹ 1.10 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 16:21 IST
Last Updated 21 ಸೆಪ್ಟೆಂಬರ್ 2020, 16:21 IST
ಪ್ರಭು ಚವಾಣ್
ಪ್ರಭು ಚವಾಣ್   

ಬೀದರ್: ಔರಾದ್- ಬೀದರ್ ರಸ್ತೆ ದುರಸ್ತಿಗೆ ₹ 1.10 ಕೋಟಿ ಹಾಗೂ ಕೌಠಾ ಸೇತುವೆ ದುರಸ್ತಿಗೆ ₹ 2 ಕೋಟಿಯ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕೆಲವು ದಿನಗಳಿಂದ ಸಾಕಷ್ಟು ಹಾಳಾಗಿತ್ತು. ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ಕೂಡ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದ್ದಾರೆ.

ಔರಾದ್-ಬೀದರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ವಿಳಂಬವಾಗುತ್ತಿದೆ. ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ರಸ್ತೆ ದುರಸ್ತಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಭಗವಂತ ಖೂಬಾ ಅವರಿಗೆ ಮನವಿ ಮಾಡಲಾಗಿತ್ತು. ಅವರು ಮುತುವರ್ಜಿ ವಹಿಸಿ ರಸ್ತೆ ದುರಸ್ತಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರ ಗಮನ ಸೆಳೆದಿದ್ದಾರೆ. ಹೀಗಾಗಿ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಆದಷ್ಟು ಶೀಘ್ರ ಅನುದಾನ ಬಿಡುಗಡೆಯಾಗಲಿದ್ದು, ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.


ಸದ್ಯಕ್ಕೆ ಕೌಠಾ ಸೇತುವೆಯ ಮೇಲಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಕೌಠಾ ಸೇತುವೆಗೆ ಹೆಚ್ಚು ನೀರು ಹರಿದು ಬಂದರೆ ಆಗುವ ಅನಾಹುತ ತಪ್ಪಿಸಲು ಮುಂಜಾಗ್ರತೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.