ಬಸವಲಿಂಗ ಪಟ್ಟದ್ದೇವರು
ಭಾಲ್ಕಿ: ಬೀದರ್ ನಗರದ ರಾಂಪೂರೆ ಬ್ಯಾಂಕ್ ಕಾಲೊನಿಯಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿ ನೂತನವಾಗಿ ಆರಂಭಿಸಿರುವ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಮೊದಲ 25 ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಪಿಯುಸಿ ಶಿಕ್ಷಣ, ಸ್ಪರ್ಧಾತ್ಮಕ ತರಬೇತಿ ನೀಡಲಾಗುವುದು. ನಂತರ ಕ್ರಮವಾಗಿ 26 ರಿಂದ 50 ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕದಲ್ಲಿ ಅರ್ಧದಷ್ಟು ರಿಯಾಯಿತಿ ನೀಡಲಾಗುವುದು ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಫೆ.2 ರಂದು (ಭಾನುವಾರ) ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಪ್ರವೇಶ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಿಂದ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ ಎಂದರು.
’ಗಡಿ ಜಿಲ್ಲೆ ಬೀದರ್ ಅನ್ನು ಶೈಕ್ಷಣಿಕವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಂಬರ್ ಓನ್ ಸ್ಥಾನಕ್ಕೇರಿಸುವ ಉದ್ದೇಶ ತಮ್ಮದ್ದಾಗಿದೆ. ಈಗಾಗಲೇ ಕಳೆದ ಸಾಲಿನ ನೀಟ್‍ನಲ್ಲಿ ಬೀದರ್ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೇರಿರುವುದು ಹೆಮ್ಮೆ ತರಿಸಿದೆ’ ಎಂದು ತಿಳಿಸಿದರು.
ಕಳೆದ ಅನೇಕ ವರ್ಷಗಳಿಂದ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಮೂಲಕ ಪ್ರತಿಭಾವಂತ ನೂರು ಮಕ್ಕಳಿಗೆ ಪ್ರತಿವರ್ಷ ಉಚಿತ ಶಿಕ್ಷಣ ಕಲ್ಪಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಬೀದರ್ ನಗರದಲ್ಲಿ ನೂತನವಾಗಿ ಆರಂಭಿಸಿರುವ ಚನ್ನಬಸವೇಶ್ವರ ಗುರುಕುಲ ಪಿಯು ಕಾಲೇಜಿನಲ್ಲಿ ಗುಣಾತ್ಮಕ ಶಿಕ್ಷಣ ಕಲ್ಪಿಸಲಾಗುವುದು. ಇದರ ಸದುಪಯೋಗ ಜಿಲ್ಲೆಯ ಪಾಲಕರು ಪಡೆದು ಕೊಂಡು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿ, ’ಬೀದರ್‌ನ ಹೊಸ ಕಾಲೇಜಿನಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಕಾಲೇಜು ಮಾದರಿಯಲ್ಲಿಯೇ ಗುಣಮಟ್ಟದ ಶಿಕ್ಷಣ, ಸೌಲಭ್ಯ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಲೋಕೇಶ ಉಡಬಾಳೆ (ಮೊ.ಸಂಖೆಗೆ 9738451506)ಗೆ ಸಂಪರ್ಕಿಸಬಹುದಾಗಿದೆ’ ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.