ADVERTISEMENT

2000 ಕ್ವಿಂಟಲ್‌ ಸೋಯಾಬೀನ್ ಬೀಜ ಪೂರೈಕೆ

ಶಾಸಕ ಸಲಗರ ಮನವಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸ್ಪಂದನೆ

ಮಾಣಿಕ ಆರ್ ಭುರೆ
Published 13 ಜೂನ್ 2021, 4:00 IST
Last Updated 13 ಜೂನ್ 2021, 4:00 IST
ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಗಳೂರಿನಲ್ಲಿ ಈಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಬೀಜ ಪೂರೈಕೆಗೆ ಆಗ್ರಹಿಸಿ ಮನವಿಪತ್ರ ಸಲ್ಲಿಸಿ ಸನ್ಮಾನಿಸಿದರು
ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಗಳೂರಿನಲ್ಲಿ ಈಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಬೀಜ ಪೂರೈಕೆಗೆ ಆಗ್ರಹಿಸಿ ಮನವಿಪತ್ರ ಸಲ್ಲಿಸಿ ಸನ್ಮಾನಿಸಿದರು   

ಬಸವಕಲ್ಯಾಣ: ಶಾಸಕ ಶರಣು ಸಲಗರ ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಈಚೆಗೆ ಭೇಟಿಯಾಗಿ ಸೋಯಾಬೀನ್ ಬಿತ್ತನೆ ಬೀಜ ಪೂರೈಸಲು ಕೇಳಿಕೊಂಡಿದ್ದರಿಂದ 2000 ಕ್ವಿಂಟಲ್ ಬೀಜ ಒದಗಿಸು ವುದಾಗಿ ಅವರು ಭರವಸೆ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 77,510 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಅದರಲ್ಲಿ ಅರ್ಧದಷ್ಟು ಅಂದರೆ 33,000 ಹೆಕ್ಟೇರ್‌ನಷ್ಟು ಸೋಯಾಬೀನ್ ಬಿತ್ತನೆ ಗುರಿ ಹೊಂದಲಾಗಿದೆ. ಇತರೆ ಬೆಳೆಗಳು ಕೂಡ ಉತ್ತಮ ಇಳುವರಿ ಕೊಡುತ್ತವೆ. ಆದರೂ, ಈಚೆಗೆ ಇಲ್ಲಿ ಸೋಯಾಬೀನ್ ಬಿತ್ತನೆ ಕ್ಷೇತ್ರ ಗಣನೀಯವಾಗಿ ಹೆಚ್ಚಾಗಿದೆ. ಇನ್ನೂ ಸಮರ್ಪಕ ಮಳೆ ಆಗಿಲ್ಲ. ಆದರೂ, ರೈತ ಸಂಪರ್ಕ ಕೇಂದ್ರಗಳ ಎದುರಲ್ಲಿ ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು ಉಂಟಾಗುತ್ತಿದೆ.

ಹೋಬಳಿಗಳ 6 ರೈತ ಸಂಪರ್ಕ ಕೇಂದ್ರ ಒಳಗೊಂಡು 33 ಬೀಜ ವಿತರಣಾ ಕೇಂದ್ರಗಳಿಂದ ಈಗಾಗಲೇ 1600 ಕ್ವಿಂಟಲ್ ಸೋಯಾಬೀನ್ ಬೀಜ ವಿತರಣೆ ಆಗಿದೆ. ಆದರೂ, ಬೀಜ ದೊರಕುತ್ತದೋ ಇಲ್ಲವೋ ಎಂದು ರೈತರು ಉದ್ದನೆಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಖಾಸಗಿ ಬೀಜ ವಿತರಣಾ ಕೇಂದ್ರಗಳಿಗಿಂತ ಇಲ್ಲಿ ₹1000 ದಷ್ಟು ಕಡಿಮೆ ಬೆಲೆಯಲ್ಲಿ ಬೀಜ ಸಿಗುತ್ತಿರುವುದು ಕೂಡ ಜನಜಂಗುಳಿಗೆ ಕಾರಣವಾಗಿದೆ.

ADVERTISEMENT

‘ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಭೇಟಿಯಾಗಿ ರೈತರಿಗೆ ಬೀಜದ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದ್ದೇನೆ. ಅವರು ಈಗಾಗಲೇ 2000 ಕ್ವಿಂಟಲ್ ಸೋಯಾಬೀನ್ ಬೀಜ ಕಳುಹಿಸುವ ವ್ಯವಸ್ಥೆ ಕೈಗೊಳ್ಳುವ ಜತೆಗೆ ಇತರೆ ಯಾವುದೇ ಬೀಜದ ಅಭಾವವೂ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.

‘ಶಾಸಕ ಶರಣು ಸಲಗರ ಕೃಷಿ ಸಚಿವರನ್ನು ಭೇಟಿಯಾಗಿ ಬೀಜದ ಸಮಸ್ಯೆ ಬಗೆಹರಿಸಿದ್ದಾರೆ. ಆದ್ದರಿಂದ ಇಬ್ಬರಿಗೂ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಲಾಗುವುದು’ ಎಂದು ಮುಖಂಡ ರತಿಕಾಂತ ಕೊಹಿನೂರ ಹೇಳಿದ್ದಾರೆ.

‘ರೈತರು ಬೀಜ ಖರೀದಿಸಿ ಇಟ್ಟುಕೊಂಡರೂ ಜಮೀನು ಸಂಪೂರ್ಣವಾಗಿ ಹಸಿಯಾದಾಗ ಮಾತ್ರ ಬಿತ್ತನೆ ಕೈಗೊಳ್ಳಬೇಕು. ಈಗ ಬರೀ 19 ಎಂ.ಎಂ ಮಳೆಯಾಗಿದೆ. ಕನಿಷ್ಠ 97 ಎಂ.ಎಂ. ಮಳೆ ಆಗಬೇಕು. ಬರುವ ವಾರದಲ್ಲಿ ಸಮರ್ಪಕ ಮಳೆಯಾಗುವ ಸಾಧ್ಯತೆ ಇದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

‘ತೊಗರಿ, ಉದ್ದು, ಹೆಸರು, ಜೋಳ ಹಾಗೂ ಇತರೆ ಬಿತ್ತನೆ ಬೀಜಗಳ ಕೊರತೆಯೂ ಆಗದಂತೆ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಂತೋಷ ಗುದಗೆ, ಪ್ರಧಾನ ಕಾರ್ಯದರ್ಶಿ ಅಣವೀರ ಬಿರಾದಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.