ADVERTISEMENT

ಬೀದರ್ ಜಿಲ್ಲೆ: ಅಪೌಷ್ಠಿಕತೆಯಿಂದ ಹತ್ತು ತಿಂಗಳಲ್ಲಿ 344 ಶಿಶುಗಳ ಸಾವು

ಜಿಲ್ಲೆಯ ತಾಯಂದಿರಲ್ಲಿ ಆತಂಕ: ಹೆರಿಗೆಗೂ ನೆರೆ ರಾಜ್ಯಗಳಿಗೆ ತೆರಳುವ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:25 IST
Last Updated 29 ನವೆಂಬರ್ 2019, 15:25 IST
   

ಬೀದರ್: ಜಿಲ್ಲೆಯಲ್ಲಿ ಹತ್ತು ತಿಂಗಳಲ್ಲಿ ಅವಧಿ ಪೂರ್ಣ ಜನನ ಹಾಗೂ ಅಪೌಷ್ಟಿಕತೆಯಿಂದ 344 ಶಿಶುಗಳು ಸಾವಿಗೀಡಾಗಿರುವುದು ತಾಯಂದಿರಲ್ಲಿ ಆತಂಕ ಸೃಷ್ಟಿಸಿದೆ.

ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ 167 ಹಾಗೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 167 ಶಿಶುಗಳು ಮೃತಪಟ್ಟಿವೆ. ದಾಖಲೆಗಳ ಪ್ರಕಾರ, ಐದು ವರ್ಷಗಳ ಅವಧಿಯಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿ 1,147 ಹಾಗೂ ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಗಳಲ್ಲಿ 1,828 ಸೇರಿ ಒಟ್ಟು 2,975 ಶಿಶುಗಳು ಮೃತಪಟ್ಟಿವೆ.

ಜಿಲ್ಲೆಯಲ್ಲಿ ಹೆರಿಗೆಯಾದ ತಕ್ಷಣ ವೈದ್ಯಕೀಯ ಕಾರಣಗಳಿಂದಾಗಿ ಕೊನೆಯುಸಿರೆಳೆಯುವ ಮಕ್ಕಳ ಪ್ರಮಾಣ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಶಿಶುಗಳ ಸಾವನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಜಿಲ್ಲೆಯ ಜನ ಹೆರಿಗೆಗೂ ನೆರೆಯ ರಾಜ್ಯಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

ADVERTISEMENT

ತಾಯಂದಿರು ಹಾಗೂ ಶಿಶುಗಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ನಿರಾಸಕ್ತಿ ಶಿಶುಗಳ ಮರಣದಂತಹ ಅನಾಹುತಕ್ಕೆ ಕಾರಣವಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗರ್ಭಿಣಿಯರಿಗೆ ಪೂರಕ ಪೌಷ್ಟಿಕ ಆಹಾರ ಕೊಡಬೇಕು. ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿಯರು ಚುಚ್ಚುಮದ್ದು ಕೊಡಬೇಕು. ಈ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

‘ಶಿಶುಗಳ ಮರಣಕ್ಕೆ ಒಂದೇ ಕಾರಣ ಇರದು. ಅವಧಿ ಪೂರ್ಣ ಜನನ, ಜನಸಿದ ಮಗುವಿನ ತೂಕ ಕಡಿಮೆ ಇರುವುದು ಹಾಗೂ ಗರ್ಭಾವಸ್ಥೆಯಲ್ಲಿ ಸರಿಯಾಗಿ ಭ್ರೂಣ ಬೆಳವಣಿಗೆಯಾಗದಿರುವುದು ಸಹ ಕಾರಣವಾಗಿದೆ. ಕೆಲ ಗರ್ಭಿಣಿಯರು ಕೊನೆಯ ಹಂತದಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ಬರುವ ಕಾರಣ ಅನಾಹುತಗಳು ಸಂಭವಿಸುತ್ತವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎನ್‌.ರೆಡ್ಡಿ ಹೇಳುತ್ತಾರೆ.

‘ಗರ್ಭಿಣಿಯರು ಆರಂಭದ ದಿನಗಳಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಪಡೆಯುತ್ತಿರಬೇಕು. ಬಹುತೇಕ ತಾಯಂದಿರು ಕೊನೆಯ ಕ್ಷಣದಲ್ಲಿ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ಶಿಶು ಮರಣ ತಡೆಯಲು ಪೌಷ್ಟಿಕ ಆಹಾರ ಕುರಿತು ತಾಯಂದಿರಿಗೆ ಗ್ರಾಮ ಮಟ್ಟದಲ್ಲಿ ತಿಳಿವಳಿಕೆ ನೀಡುವ ಅಗತ್ಯ ಇದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರತಿಕಾಂತ ಸ್ವಾಮಿ ತಿಳಿಸುತ್ತಾರೆ.

ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು ಆರು ವರ್ಷದೊಳಗಿನ ಮಕ್ಕಳಕಲ್ಯಾಣ, ಶಿಶು ಮರಣ ದರ, ಅಪೌಷ್ಟಿಕತೆ, ಕಾಯಿಲೆ ಪ್ರಮಾಣ ಕಡಿಮೆ ಮಾಡುವುದು, ಪೌಷ್ಟಿಕ ಮಟ್ಟವನ್ನು ಕಾಪಾಡುವ ದಿಸೆಯಲ್ಲಿ ತಾಯಂದಿರ ಸಾಮರ್ಥ್ಯವನ್ನು ಹೆಚ್ಚಿಸುವುದು ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಗದೀಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.