ADVERTISEMENT

ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡುವ ಯತ್ನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 6:59 IST
Last Updated 9 ಜನವರಿ 2018, 6:59 IST
ದಾನಿಶ್‌ ಅಲಿ
ದಾನಿಶ್‌ ಅಲಿ   

ಬೀದರ್: ‘ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಲು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ನಡೆಸಿರುವ ಕುತಂತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಲಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನಿಶ್‌ ಅಲಿ ಹೇಳಿದರು.

‘ಸಂಸದೀಯ ವ್ಯವಸ್ಥೆಯನ್ನು ಬಲಪಡಿಸಲು ರಾಷ್ಟ್ರಕ್ಕೆ ಬಹುಪಕ್ಷೀಯ ಆಡಳಿತ ಅಗತ್ಯ ಇದೆ. ಅಮೆರಿಕ ಮಾದರಿಯ ದ್ವಿಪಕ್ಷೀಯ ಆಡಳಿತದ ವಿಚಾರವನ್ನು ಬಿಜೆಪಿ ಮುಖಂಡರು ಕೈಬಿಡಬೇಕು’ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದರು.

‘ದೇಶದ ಇತಿಹಾಸ ಬದಲಿಸುವ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ದೇಶ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮಹಾತ್ಮ ಗಾಂಧಿ ಹಾಗೂ ಬಾಬಾ ಸಾಹೇಬ ಅಂಬೇಡ್ಕರ್‌ ಕನಸುಗಳನ್ನು ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ’ ಎಂದು ಆರೋಪಿಸಿದರು.

ADVERTISEMENT

‘ಲೋಕಸಭೆ ಚುನಾವಣೆಗೆ ಮುಂಚೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಎರಡು ವರ್ಷಗಳಲ್ಲಿ ಜಿಡಿಪಿ ಬಹಳಷ್ಟು ಕುಸಿದಿದೆ. ಕೃಷಿ ಉತ್ಪಾದಕರ ದರ ಶೇಕಡ 1.5ಕ್ಕೆ ಇಳಿದಿದೆ. ದೇವೇಗೌಡರು ಪ್ರಧಾನಿ ಆಗಿದ್ದಾಗ ಕೃಷಿ ಉತ್ಪಾದಕರ ದರ ಶೇಕಡ 4.5 ಇತ್ತು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿಜೆಪಿಯ ತಂತ್ರ ಫಲ ನೀಡದು. ಅಮಿತ್‌ ಶಾ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡು ಸಾವಿರ ಜನ ಸಹ ಸೇರಿರಲಿಲ್ಲ. ಜನ ಇಲ್ಲದ್ದಕ್ಕೆ ಅವರು ಒಂದೂವರೆ ತಾಸು ಏರ್‌ಪೋರ್ಟ್‌ನಲ್ಲಿ ನಿಲ್ಲಬೇಕಾಯಿತು. ರಾಜ್ಯದ ಮತದಾರರು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ಈಗ ಪ್ರಾದೇಶಿಕ ಪಕ್ಷಗಳ ಬಗೆಗೆ ಒಲವು ತೋರುತ್ತಿದ್ದಾರೆ’ ಎಂದು ಹೇಳಿದರು.

‘ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜ. 17ರಿಂದ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿ ಕರ್ನಾಟಕ ವಿಕಾಸ ಯಾತ್ರೆ ಕೈಗೊಳ್ಳಲಿದ್ದಾರೆ. ಬೀದರ್‌ ಜಿಲ್ಲೆಯ ಔರಾದ್‌ನಿಂದ ಯಾತ್ರೆ ಆರಂಭಿಸುವ ಯೋಜನೆ ಇದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಜನವರಿ ಅಂತ್ಯಕ್ಕೆ ವಿಧಾನಸಭಾ ಚುನಾವಣೆಯ ಜೆಡಿಎಸ್‌ ಪ್ರಣಾಳಿಕೆ ಸಿದ್ಧವಾಗಲಿದೆ’ ಎಂದು ತಿಳಿಸಿದರು.

ಅಭಿವೃದ್ಧಿ ವೇಗ ಕಡಿಮೆ: ‘ಬೀದರ್‌ ಜಿಲ್ಲೆಯಲ್ಲಿ ಅಭಿವೃದ್ಧಿಯ ವೇಗ ಕಡಿಮೆ ಆಗಿದೆ. ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿಯಿಂದ ಉದ್ಘಾಟನೆ ಮಾಡಿಸಲು ತರಾತುರಿಯಲ್ಲಿ ಕೆಲಸ ಮಾಡಲಾಗಿದೆ. 371(ಜೆ) ತಿದ್ದುಪಡಿ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ’ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಆರೋಪಿಸಿದರು.

‘ವಿಶ್ವದ ಗಮನ ಸೆಳೆಯುವಂತಹ ಸ್ಮಾರಕಗಳು ಬೀದರ್ ಜಿಲ್ಲೆಯಲ್ಲಿ ಇವೆ. ಪ್ರವಾಸೋದ್ಯಮ ಇಲಾಖೆಯ ಸಚಿವ ಪ್ರಿಯಾಂಕ್‌ ಖರ್ಗೆ ನೆರೆಯ ಜಿಲ್ಲೆಯವರಾದರೂ ಬೀದರ್‌ಗೆ ಭೇಟಿ ನೀಡಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಕುಂಠಿತಗೊಂಡಿದೆ. ಬೀದರ್ ಉತ್ಸವ ನಿಂತು ಹೋಗಿದೆ’ ಎಂದು ಆರೋಪಿಸಿದರು.

‘1960ರಲ್ಲಿ ಒಂದೇ ಅವಧಿಗೆ ಮಂಡ್ಯ ಹಾಗೂ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾಗಿವೆ. ರಾಜ್ಯ ಸರ್ಕಾರ, ಮಂಡ್ಯದ ಸಕ್ಕರೆ ಕಾರ್ಖಾನೆಗೆ ಮಾತ್ರ ಆರ್ಥಿಕ ನೆರವು ಕೊಡುತ್ತಿದೆ. ಬೀದರ್‌ ಸಹಕಾರ ಸಕ್ಕರೆ  ಕಾರ್ಖಾನೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಕಾರ್ಖಾನೆಯ ಅಧ್ಯಕ್ಷರಾದ ಬಿಜೆಪಿಯ ಸಂಜಯ ಖೇಣಿ ಸಹ ಕಾರ್ಖಾನೆಯ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಕಾರ್ಖಾನೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಕಾರ್ಖಾನೆ ಪುನಶ್ಚೇತನಕ್ಕೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

* * 

ಬಿಜೆಪಿ ಮುಖಂಡರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ 50 ವರ್ಷಗಳ ಕಾಲ ತನ್ನ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಿರಲಿಲ್ಲ
ದಾನಿಶ್‌ ಅಲಿ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ</p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.