ADVERTISEMENT

ಕೊರತೆ ನಡುವೆ ಗುಣಾತ್ಮಕ ಶಿಕ್ಷಣ

ಬಸವರಾಜ ಎಸ್.ಪ್ರಭಾ
Published 10 ಜನವರಿ 2018, 7:10 IST
Last Updated 10 ಜನವರಿ 2018, 7:10 IST
ಭಾಲ್ಕಿ ತಾಲ್ಲೂಕಿನ ಭಾಗ್ಯನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳೆದ ಉದ್ಯಾನವನ್ನು ಸ್ವಚ್ಛಗೊಳಿಸುತ್ತಿರುವ ವಿದ್ಯಾರ್ಥಿಗಳು
ಭಾಲ್ಕಿ ತಾಲ್ಲೂಕಿನ ಭಾಗ್ಯನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳೆದ ಉದ್ಯಾನವನ್ನು ಸ್ವಚ್ಛಗೊಳಿಸುತ್ತಿರುವ ವಿದ್ಯಾರ್ಥಿಗಳು   

ಭಾಲ್ಕಿ: ತಾಲ್ಲೂಕಿನಿಂದ 9 ಕಿ.ಮೀ ದೂರದಲ್ಲಿರುವ ಭಾಗ್ಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಅನೇಕ ಕೊರತೆ ನಡುವೆ ವಿದ್ಯಾರ್ಥಿಗಳ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿದ್ದು, ಪಾಲಕರು, ಗ್ರಾಮಸ್ಥರಿಂದ ಸೈ ಎನಿಸಿಕೊಂಡಿದ್ದಾರೆ.

ಶಾಲೆಗೆ ಸಮೀಪದ ಕಪಲಾಪೂರ, ನಾವದಗಿ ತಾಂಡಾ ಗ್ರಾಮಗಳಿಂದ ಮಕ್ಕಳು ಬರುತ್ತಾರೆ. 1ರಿಂದ 8ನೇ ತರಗತಿವರೆಗೆ 95 ವಿದ್ಯಾರ್ಥಿಗಳಿದ್ದಾರೆ. ಸಮಾಜ ವಿಜ್ಞಾನ, ಇಂಗ್ಲೀಷ್‌ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕೆ ಅಗತ್ಯವಾಗಿರುವ ಆಟದ ಮೈದಾನ ಇದೆ. ಆದರೆ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಮಕ್ಕಳಿಗೆ ವಿಜ್ಞಾನ ವಿಷಯದ ಪ್ರಾಯೋಗಿಕ ಜ್ಞಾನ ನೀಡಲು ಪ್ರಯೋಗಾಲಯ ಇಲ್ಲ. ಗಣಕ ಯಂತ್ರದ ಕುರಿತು ತಿಳಿಸಲು ಗಣಕ ಯಂತ್ರಗಳೇ ಇಲ್ಲ. ಇಷ್ಟೆಲ್ಲಾ ಕೊರತೆ ಇದ್ದರೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೊಡೆತ ಬೀಳದಂತೆ ಇರುವಷ್ಟೇ ಶಿಕ್ಷಕರು ಇತರ ವಿಷಯಗಳನ್ನೂ ಬೋಧಿಸುತ್ತಿದ್ದೇವೆ ಎಂದು ಮುಖ್ಯಶಿಕ್ಷಕ ಷಡಕ್ಷರಿ ಹಿರೇಮಠ ತಿಳಿಸುತ್ತಾರೆ.

ಇಲ್ಲಿ ಮಾಡುತ್ತ ಕಲಿ ಎನ್ನುವ ಮಹಾತ್ಮ ಗಾಂಧೀಜಿ ತತ್ವದ ಅಕ್ಷರಶಃ ಪಾಲನೆ ಆಗುತ್ತಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಭಾರವನ್ನು ಹೊರದೆ ಸಂತಸ, ಸ್ವ–ವೇಗ, ಬಹುವರ್ಗದ, ಬಹುಹಂತದ ಕಲಿಕೆ, ಸ್ವಕಲಿಕೆ ಎಂಬ ಐದು ತತ್ವಗಳನ್ನು ಆಧಾರವಾಗಿಟ್ಟುಕೊಂಡು ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯ ಮೇಲೆ ಜನ್ಮ ತಾಳಿರುವ ನಲಿ–ಕಲಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ.

ADVERTISEMENT

ನಲಿ–ಕಲಿಯಲ್ಲಿ 27 ಮಕ್ಕಳು ಇದ್ದಾರೆ. ನಲಿ–ಕಲಿ ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳಿಗೆ ಚಟುವಟಿಕೆಯಾಧಾರಿತವಾಗಿ, ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಕಲಿಸಲು ಸಹಕಾರಿಯಾಗಿದೆ ಎಂದು ಶಿಕ್ಷಕಿಯರಾದ ಸುಮಾವತಿ ಭುಸಗುಂಡೆ, ಕಮಲಾ ಕರುಣೆ ವಿವರಿಸುತ್ತಾರೆ.

ಗ್ರಾಮಸ್ಥರ ಸಹಕಾರದಿಂದ ಶಾಲೆ ಆವರಣದಲ್ಲಿ ಸಣ್ಣ ಉದ್ಯಾನ ನಿರ್ಮಿಸಿದ್ದೇವೆ. ಪ್ರತಿನಿತ್ಯ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಗ್ರಾಮದ ಜನರು ಶಾಲೆಗೆ ಒಂದು ಎಕರೆ ಭೂಮಿ ದಾನ ಮಾಡಿದ್ದಾರೆ. ಶಾಲೆ ಆವರಣದಲ್ಲಿ ವೇದಿಕೆ ನಿರ್ಮಿಸಿ ಕೊಟ್ಟಿದ್ದಾರೆ.

ಪ್ರಭು ದುಬಲಗುಂಡೆ ಅವರು ಶಾಲೆಯ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. 2004–05ನೇ ಸಾಲಿನಲ್ಲಿ ಶೇ 100 ರಷ್ಟು ಹಾಜರಾತಿ, ಕಲಿಕೆಗಾಗಿ ಕಲಿಕಾ ಖಾತ್ರಿ ಪ್ರಶಸ್ತಿ, 2016ರಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕಣ ಅಂಗೀಕರಣ ಪರಿಷತ್‌ ವತಿಯಿಂದ ‘ಬಿ’ ಗ್ರೇಡ್‌ ಲಭಿಸಿದೆ.

2016 ರಲ್ಲಿಯೇ ಬೆಳಕಿನ ಆವರ್ತಕ ಪ್ರತಿಫಲನ ವಿಷಯ ಕುರಿತು ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಮಕ್ಕಳ ಓದುವ ಹವ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವರ್ಗಕೋಣೆ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ.

ಶಿಕ್ಷಕರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಂಬಂಧಪಟ್ಟವರು ಶೀಘ್ರದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ವಿಷಯ ಶಿಕ್ಷಕರ, ವಿಜ್ಞಾನ ಪ್ರಯೋಗಾಲಯ, ಗಣಕ ಯಂತ್ರಗಳ ಕೊರತೆ ನೀಗಿಸಬೇಕು. ಬಿರುಕು ಬಿಟ್ಟಿರುವ ಬಿಸಿಯೂಟದ ಕೋಣೆ ನೆಲ ಸಮಗೊಳಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ.

* * 

ಮಕ್ಕಳ ಸಂಖ್ಯೆ ಹೆಚ್ಚಿಸಲು ಗ್ರಾಮಸ್ಥರ ಸಹಕಾರದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಅಕ್ಕಪಕ್ಕದ ಹಳ್ಳಿಗಳ್ಳಿಗೆ ಶಾಲಾ ವಾಹನ ಕಳುಹಿಸಲು ಯೋಚಿಸಲಾಗುತ್ತಿದೆ
ಷಡಕ್ಷರಿ ಹಿರೇಮಠ
ಮುಖ್ಯಶಿಕ್ಷಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.