ADVERTISEMENT

911 ಅಂಗವಿಕಲರ ಮೌಲ್ಯಮಾಪನ

ಪಂಡಿತ ದೀನದಯಾಳ್ ಉಪಾಧ್ಯಾಯ ಸಂಸ್ಥೆ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 13:11 IST
Last Updated 19 ಸೆಪ್ಟೆಂಬರ್ 2021, 13:11 IST
ಬೀದರ್‌ನ ಶಹಾಪುರ ಗೇಟ್ ಬಳಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ ಅಂಗವಿಕಲರ ಮೌಲ್ಯಮಾಪನ ನಡೆಸಲಾಯಿತು
ಬೀದರ್‌ನ ಶಹಾಪುರ ಗೇಟ್ ಬಳಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ ಅಂಗವಿಕಲರ ಮೌಲ್ಯಮಾಪನ ನಡೆಸಲಾಯಿತು   



ಬೀದರ್‌: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್‍ನ ದಕ್ಷಿಣ ಪ್ರಾದೇಶಿಕ ಕೇಂದ್ರವು ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಮೌಲ್ಯಮಾಪನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ಸಾಧನ, ಸಲಕರಣೆ ವಿತರಣೆಗಾಗಿ ಮೂರು ದಿನಗಳಲ್ಲಿ ಒಟ್ಟು 911 ಅಂಗವಿಕಲರ ಮೌಲ್ಯಮಾಪನ ನಡೆಸಲಾಯಿತು. ನವದೆಹಲಿ ಹಾಗೂ ಹೈದರಾಬಾದ್‍ನ ಪರಿಣಿತ ವೈದ್ಯರು ಶುಕ್ರವಾರ ಬೀದರ್ ಹಾಗೂ ಔರಾದ್ ತಾಲ್ಲೂಕಿನ 240, ಶನಿವಾರ ಭಾಲ್ಕಿ, ಬಸವಕಲ್ಯಾಣ ಮತ್ತು ಕಮಲನಗರ ತಾಲ್ಲೂಕಿನ 421 ಹಾಗೂ ಭಾನುವಾರ ಚಿಟಗುಪ್ಪ ಮತ್ತು ಹುಮನಾಬಾದ್ ತಾಲ್ಲೂಕಿನ 250 ಅಂಗವಿಕಲರ ಮೌಲ್ಯಮಾಪನ ಮಾಡಿದರು.

ಶಾಹೀನ್ ಶಿಕ್ಷಣ ಸಂಸ್ಥೆಯ ವತಿಯಿಂದ ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಿಂದ ನೋಂದಣಿ ಮಾಡಿಸಿದ್ದ ಅಂಗವಿಕಲರಿಗೆ ಶಿಬಿರ ಸ್ಥಳಕ್ಕೆ ಕರೆ ತರಲು ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ADVERTISEMENT

ಅಂಗವಿಕಲರಿಗೆ ನೆರವಾಗಲು ಶಾಹೀನ್ ಕಾಲೇಜಿನಲ್ಲಿ 2008 ರಲ್ಲೂ ಅಂಗವಿಕಲರ ಮೌಲ್ಯಮಾಪನ ಶಿಬಿರ ನಡೆಸಲಾಗಿತ್ತು. ಆಗ 900 ಜನ ಅದರ ಪ್ರಯೋಜನ ಪಡೆದಿದ್ದರು. ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದರು.

ಶಿಬಿರದಲ್ಲಿ ಮೌಲ್ಯಮಾಪನ ಮಾಡಿಸಿಕೊಂಡವರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯು ಮುಂದಿನ ದಿನಗಳಲ್ಲಿ ತ್ರಿಚಕ್ರ ಸೈಕಲ್, ಸಿ.ಪಿ. ಕುರ್ಚಿ, ಮಡಚುವ ಗಾಲಿ ಕುರ್ಚಿ, ವಾಕರ್, ಊರುಗೋಲು, ರೊಲೇಟರ್ (ಬಿ), ಸ್ಮಾರ್ಟ್ ಕೇನ್ (ದೃಷ್ಟಿಹೀನ) ಸೇರಿ 12 ಬಗೆಯ ಸಲಕರಣೆ ವಿತರಣೆ ಮಾಡಲಿದೆ ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ, ಬೀದರ್ ಜಿಲ್ಲಾ ಅಭಿವೃದ್ಧಿ ವೇದಿಕೆ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ರೋಟರಿ ಕ್ಲಬ್ ಬೀದರ್, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರಾಬ್ತಾ ಇ-ಮಿಲ್ಲತ್, ಡಾ. ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಷನ್, ಆರ್ಬಿಟ್ ಸಂಸ್ಥೆ, ಮೈನಾರಿಟಿ ರಿಕ್ರ್ಯೂಟ್‍ಮೆಂಟ್ ಫೋರಂ ಹಾಗೂ ಎಚ್.ಆರ್.ಎಸ್. ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.