ADVERTISEMENT

ಜನ ಮನ ಸೆಳೆದ ಸಾಂಸ್ಕೃತಿಕ ಸೌರಭ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:34 IST
Last Updated 30 ಸೆಪ್ಟೆಂಬರ್ 2022, 16:34 IST
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭವನ್ನು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಉದ್ಘಾಟಿಸಿದರು
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭವನ್ನು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಉದ್ಘಾಟಿಸಿದರು   

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2022ನೇ ಸಾಲಿನ ಸಾಂಸ್ಕೃತಿಕ ಸೌರಭ ಜನ ಮನ ಸೆಳೆಯಿತು.

ಬೀದರ್ ಹಾಗೂ ನೆರೆ ಜಿಲ್ಲೆಗಳ ‘ಎ’ ಮತ್ತು ‘ಬಿ’ ಗ್ರೇಡ್ ಹಾಗೂ ಸರ್ಕಾರದ ಪ್ರಶಸ್ತಿ ಪುರಸ್ಕೃತ ಕಲಾವಿದರು ಪ್ರೇಕ್ಷಕರಿಗೆ ಗ್ರಾಮೀಣ ಸೊಗಡಿನ ಕಲೆಗಳ ರಸದೌತಣ ಉಣ ಬಡಿಸಿದರು.

ಕೊಳಾರದ ರಮೇಶ ಮತ್ತು ತಂಡ ಶಾಸ್ತ್ರೀಯ ಸಂಗೀತ, ಬಗದಲ್‍ನ ವೈಜಿನಾಥ ಸಜ್ಜನಶೆಟ್ಟಿ ಹಾಗೂ ತಂಡ ವಚನ ಸಂಗೀತ, ಬೀದರ್‍ನ ಸಂಜುಕಮಾರ ಸ್ವಾಮಿ ಮತ್ತು ತಂಡ ಜನಪದ ಗೀತೆಗಳು, ರಾಣಿ ಸತ್ಯಮೂರ್ತಿ ಹಾಗೂ ತಂಡ ನೃತ್ಯ ರೂಪಕ, ಬಸವಕಲ್ಯಾಣದ ಶಂಭುಲಿಂಗ ಮತ್ತು ತಂಡ ಡೊಳ್ಳು ಕುಣಿತ, ಮಣ್ಣೂರಿನ ಸುನೀಲ್ ಹಾಗೂ ತಂಡ ತಮಟೆ, ಸಾಧುಘಾಟದ ಪದ್ಮಾಕರ್ ಜಿ.ಎಂ. ಮಹಾರಾಜ ಹಾಗೂ ತಂಡ ಕಥಾ ಕೀರ್ತನ ಮತ್ತು ಯರಂಡಿಯ ರವಿಕುಮಾರ ಹಾಗೂ ತಂಡದವರು ಆಕರ್ಷಕ ಡೊಳ್ಳು ಕುಣಿತ ಪ್ರಸ್ತುತಪಡಿಸಿದರು. ಹುಮನಾಬಾದ್‍ನ ವಿನೋದಕುಮಾರ ಹಾಗೂ ತಂಡದ ಹಳ್ಳಿ ಗೊಂಬೆ ಸಿಟಿ ರಂಭೆ ನಾಟಕ ಗ್ರಾಮ-ಪಟ್ಟಣಗಳ ಸಂಸ್ಕೃತಿ ಬಿಂಬಿಸಿತು. ನಾಟಕದ ಪ್ರಸಂಗಗಳು ಸಭಿಕರು ನಕ್ಕು ನಲಿಯುವಂತೆ ಮಾಡಿದವು.

ADVERTISEMENT

ಸರ್ಕಾರದಿಂದ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ:

ಬೀದರ್: ಕನ್ನಡ ಭಾಷೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹೇಳಿದರು.
ಇಲ್ಲಿಯ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲಕುಮಾರ ಕ್ರಿಯಾಶೀಲರಾಗಿದ್ದಾರೆ. ದೇಸಿ ಸಂಸ್ಕೃತಿ ಉಳಿಸಿ ಬೆಳೆಸಲು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಜಿಲ್ಲೆಯಲ್ಲೂ ಇಲಾಖೆಯಿಂದ ವಿವಿಧ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಜನಪರ ಉತ್ಸವ, ಗಿರಿಜನ ಉತ್ಸವ, ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಮೊದಲಾದ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ವೇದಿಕೆ ದೊರಕಿಸಿಕೊಡಲಾಗುತ್ತಿದೆ. ಕಲೆ ಬೆಳವಣಿಗೆಗೆ ನಿರಂತರ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಸಾಹಿತಿ ಸಂಜೀವಕುಮಾರ ಅತಿವಾಳೆ, ಕೆಆರ್‍ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ವೀರಭದ್ರಯ್ಯ ಬುಯ್ಯ, ಉದ್ಯಮಿ ಪೀರಪ್ಪ ಸಿಂಧೆ ಇದ್ದರು.

ದೇವದಾಸ ಜೋಶಿ ನಿರೂಪಿಸಿದರು. ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.