ADVERTISEMENT

ಬೇಡಿಕೆ ಇಲ್ಲದೆ ಟೊಮೊಟೊ ನಾಲೆಗೆ ಎಸೆದ ರೈತ

ಕಲ್ಲಂಗಡಿ ಬೆಳೆಗೂ ಬೇಡಿಕೆ ಕುಸಿತ; ನಷ್ಟದಲ್ಲಿ ಹುಲಸೂರಿನ ರೈತ ಅಂಗದರಾವ

​ಪ್ರಜಾವಾಣಿ ವಾರ್ತೆ
Published 24 ಮೇ 2021, 4:17 IST
Last Updated 24 ಮೇ 2021, 4:17 IST
ಹುಲಸೂರಿನ ರೈತ ಬೆಳೆದ ಟೊಮೆಟೊ ನಾಲೆಯಲ್ಲಿ ಎಸೆದಿರುವುದು
ಹುಲಸೂರಿನ ರೈತ ಬೆಳೆದ ಟೊಮೆಟೊ ನಾಲೆಯಲ್ಲಿ ಎಸೆದಿರುವುದು   

ಹುಲಸೂರ: ಕೋವಿಡ್‌ ಕೃಷಿಯ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರಿದೆ. ತಾಲ್ಲೂಕಿನ ರೈತ ಅಂಗದರಾವ ಭೋಸಲೆ ಅವರು ಬೆಳೆದ ಟೊಮೆಟೊ ಹಾಗೂ ಕಲ್ಲಂಗಡಿಗೆ ಬೇಡಿಕೆ ಇಲ್ಲದ್ದರಿಂದ ನಷ್ಟ ಅನುಭವಿಸುವಂತಾಗಿದೆ.

‘ಒಂದು ಕಡೆ ವೈರಸ್‌ ಹರಡುವ ಭಯ, ಇನ್ನೊಂದು ಕಡೆ ಲಾಕ್‌ಡೌನ್‌ ನಿಯಮಗಳ ಪಾಲನೆ ಮಾಡುವ ಕಾರಣ ಕಟಾವ್‌ ಮಾಡಲು ಬಂದಿರುವ ಟೊಮೆಟೊ ಹಾಗೂ ಕಲ್ಲಂಗಡಿ ಗ್ರಾಹಕರು ಇಲ್ಲದೆ ಬಿಸಾಡುವ ಪರಿಸ್ಥಿತಿ ಬಂದಿದೆ’ ಎಂದು ರೈತನ ಮಗ ಧರ್ಮೇಂದ್ರ ಅಂಗದರಾವ ಭೋಸಲೆ ತಮ್ಮ ನೋವು ತೋಡಿಕೊಂಡರು.

‘ಸುಮಾರು ₹2.5 ಲಕ್ಷ ಬಂಡವಾಳ ಹಾಕಿ ಒಂದು ಎಕರೆ ಟೊಮೆಟೊ, ಒಂದು ಎಕರೆ ಕಲ್ಲಂಗಡಿ ಬೆಳೆಸಿದ್ದೇವೆ. ಬೇಸಿಗೆ ಹಾಗೂ ಮದುವೆ ಸಮಾರಂಭಗಳಿಂದ ಹಾಕಿದ ಬಂಡವಾಳ ಬಿಟ್ಟು ಕನಿಷ್ಠ ₹1.50 ಲಕ್ಷ ಲಾಭದ ನಿರೀಕ್ಷೆ ಇತ್ತು. ಯಾವುದೇ ಮದುವೆಗಳು ದೊಡ್ಡ ಮಟ್ಟದಲ್ಲಿ ನಡೆಯದ ಪರಿಣಾಮ ಟೊಮೆಟೊ, ತರಕಾರಿಯನ್ನು ಯಾರೂ ಕೇಳುತ್ತಿಲ್ಲ. ಈ ಕಾರಣ ತೀರಾ ನಷ್ಟ ಅನುಭವಿಸಿದ್ದೇವೆ’ ಎಂದು ಹೇಳಿದರು.

ADVERTISEMENT

‘ಜಮೀನಿನಲ್ಲಿ 2000 ಕ್ಯಾರೆಟ್‌ ಟೊಮೆಟೊ ಬೆಳೆದಿದೆ. ಅದನ್ನು ಮಾರುಕಟ್ಟೆಗೆ ಸಾಗಿಸಿದರೆ ಗ್ರಾಹಕರು ಕೊಳ್ಳದೆ ಇರುವ ಕಾರಣ ಮನೆ ಮನೆ ತೆರಳಿ ಮಾರಾಟ ಮಾಡಲು 10 ಕ್ಯಾರೆಟ್‌ ಕಳಿಸಿದರೆ ಅದರಲ್ಲಿ 4 ಕ್ಯಾರೆಟ್‌ ಮಾತ್ರ ಮಾರಾಟವಾಗಿ ಉಳಿದದ್ದು ನಷ್ಟವಾಗುತ್ತಿದೆ. ನಗರದ ಮಾರುಕಟ್ಟೆಗೆ ತೆಗೆದುಕೊಂಡು ಹೋದಲ್ಲಿ ಮಧ್ಯವರ್ತಿಗಳು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ. ಮಾರುಕಟ್ಟೆಗೆ ಸಾಗಿಸಿದ ವಾಹನದ ಬಾಡಿಗೆ ಕೂಡಾ ಬರುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಕಲ್ಲಂಗಡಿ ವ್ಯವಹಾರ ಕೂಡ ಇದಕ್ಕೆ ಹೊರತಾಗಿಲ್ಲ. ಸೋಂಕಿನ ಭಯದಿಂದ ಕಲ್ಲಂಗಡಿ ತಿನ್ನಲು ಜನ ಹೆದರುತ್ತಿದ್ದು, ಗ್ರಾಹಕರು ಇಲ್ಲದೆ ಹಾಳಾಗುತ್ತಿದೆ. ಕಟಾವು ಮಾಡದೆ ಹಾಗೆ ಇಟ್ಟಲ್ಲಿಅದಕ್ಕೆ ಕೀಟ ಬಾಧಿಸುವ ಭಯ ಇದೆ’ ಎಂದು ಧರ್ಮೇಂದ್ರ ಭೋಸಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.