ADVERTISEMENT

ಬೀದರ್‌: ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆ

ಗಮನ ಸೆಳೆದ ಸಾಂಪ್ರದಾಯಿಕ ಕಲಾ ತಂಡಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:34 IST
Last Updated 4 ಸೆಪ್ಟೆಂಬರ್ 2022, 16:34 IST
ಬೀದರ್‌ನ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಗಣೇಶನ ಭಕ್ತರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು
ಬೀದರ್‌ನ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಗಣೇಶನ ಭಕ್ತರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು   

ಬೀದರ್‌: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು.

ಗಣೇಶ ಮಹಾ ಮಂಡಳದ ಪದಾಧಿಕಾರಿಗಳು ಓಲ್ಡ್‌ಸಿಟಿಯ ರಾಮ ಮಂದಿರದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದರು. ನಗರದ ಚೌಬಾರಾದಲ್ಲಿ ನಿರ್ಮಿಸಿದ್ದ ದತ್ತಾ ಮೈಲೂರಕರ್ ವೇದಿಕೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು,ಗಣೇಶ ಮಹಾ ಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಉಪಾಧ್ಯಕ್ಷ ಈಶ್ವರ ಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಜಿ.ಎನ್. ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಡಾ.ಬಸವರಾಜ ಪಾಟೀಲ ಅಷ್ಟೂರ, ಶಿವರತನ್‌ ಮಾಲಾನಿ, ಡಿ.ವಿ. ಸಿಂದೋಲ್ ಹಾಗೂ ಬಿ.ಜಿ. ಶೆಟಕಾರ್ ಇದ್ದರು.

ADVERTISEMENT

ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಭಕ್ತರು ನಗರದ ವಿವಿಧೆಡೆ ಸ್ಥಾಪನೆ ಮಾಡಿದ್ದ ಗಣೇಶನ ಮೂರ್ತಿಗಳನ್ನು ಬಸವೇಶ್ವರ ವೃತ್ತ ಬಳಿಯ ನಯಾಕಮಾನ್‌ ಮಾರ್ಗವಾಗಿ ಚೌಬಾರಾ ಬಳಿ ಸೇರಿದವು. ಅಲ್ಲಿಂದ ಗವಾನ್‌ ಚೌಕ್‌, ಶಹಾಗಂಜ್‌, ಅಂಬೇಡ್ಕರ್ ವೃತ್ತ, ನಾವದಗೇರಿ, ಜ್ಞಾನಸುಧಾ ವಿದ್ಯಾಲಯದ ಮಾರ್ಗವಾಗಿ ಕಂದಗೂಳ ಸಮೀಪದ ಸೇತುವೆ ಸ್ಥಳಕ್ಕೆ ಬಂದು ಮಾಂಜ್ರಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.

‌ಜಿಲ್ಲಾಡಳಿತ ಡಿಜೆ ಬಳಕೆ ನಿಷೇಧಿಸಿದ್ದರಿಂದ ಗಣೇಶೋತ್ಸವ ಮಂಡಳಗಳು ಡೊಳ್ಳು, ತಮಟೆ, ಹಲಗೆ ಮೇಳಕ್ಕೆ ಆದ್ಯತೆ ನೀಡಿದ್ದವು. ಕೆಲ ಮಂಡಳಿಗಳು ನಿಷೇಧ ಲೆಕ್ಕಿಸದೇ ರಾತ್ರಿ 10 ಗಂಟೆವರೆಗೆ ಡಿಜೆ ಬಳಸಿದವು.

ಗಾಂಧಿ ಗಂಜ್‌ ಗಣಪತಿ ಮಂಡಳಿಯವರು ಮಹಾರಾಷ್ಟ್ರದ ಕಲಾವಿದರ ತಂಡವನ್ನು ಕರೆಯಿಸಿದ್ದರು. ಬ್ಯಾಂಡ್‌ ಕಂಪನಿ ಕಲಾವಿದರು ಛತ್ರ ಛಾಮರ ಹಿಡಿದುಕೊಂಡು ಡೊಳ್ಳು ಬಾರಿಸಿ ಗಮನ ಸೆಳೆದರು. ಯುವಕರು ಡೊಳ್ಳು ಬಾರಿಸಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಕೇಂದ್ರ ಸಚಿವರು ಹಾಗೂ ಗಣೇಶ ಮಹಾ ಮಂಡಳದ ಪದಾಧಿಕಾರಿಗಳು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಏಕದಂತನ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಕೆಲ ಯುವಕರು ಕೇಸರಿ ಧ್ವಜ ಹಿಡಿದು ಗಣಪತಿ ಬಪ್ಪ ಮೋರಯಾ, ಗಣೇಶ ಗಣೇಶ ಮೋರಯಾ, ಮಂಗಳಮೂರ್ತಿ ಮೋರಯಾ ಎನ್ನುವ ಜಯಘೋಷ ಮೊಳಗಿಸಿದರು. ಯುವಕರು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅನೇಕ ಭಕ್ತರು ಮನೆ ಗಣಪತಿಗಳನ್ನು ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾರಿಯಲ್ಲಿ ಇಟ್ಟು ಹೋದರೆ, ಕೆಲವರು ಮನೆ ಮೇಲೆ ಗಣಪತಿ ಇಟ್ಟು ವಿಸರ್ಜನೆ ಮಾಡಿದರು.

‘25 ವರ್ಷಗಳ ಹಿಂದೆ ದೊಡ್ಡ ಗಣಪತಿಗಳ ಮೆರವಣಿಗೆ ಭವಾನಿ ಮಂದಿರದ ಆವರಣದಿಂದ ಆರಂಭವಾಗುತ್ತಿತ್ತು. ಪ್ರಸ್ತುತ ನಯಾಕಮಾನ್‌ನಿಂದ ಮೆರವಣಿಗೆ ಆರಂಭವಾಗಿ ಕುಂದಗೂಳ ಸೇತುವೆ ಬಳಿ ಮುಕ್ತಾಯಗೊಳ್ಳುತ್ತದೆ’ ಎಂದು ಗಣಪತಿ ಮಹಾ ಮಂಡಳದ ಉಪಾಧ್ಯಕ್ಷ ಈಶ್ವರಸಿಂಗ್‌ ಠಾಕೂರ್ ತಿಳಿಸಿದರು.

ದೊಡ್ಡ ಗಣಪತಿ ಮೂರ್ತಿಗಳ ಮೆರವಣಿಗೆ ಜಿಲ್ಲಾಧಿಕಾರಿ ನಿವಾಸದ ಮುಂದಿನ ಮಾರ್ಗದಿಂದ ಜನವಾಡ ರಸ್ತೆಗೆ ಬಂದರೆ, ಸಣ್ಣ ಗಣಪತಿಗಳು ಶಹಾಗಂಜ್‌ ಮಾರ್ಗವಾಗಿ ಜನವಾಡ ರಸ್ತೆಗೆ ಬಂದು ಸೇರಿಕೊಂಡವು. ನಂತರ ಎಲ್ಲ ಗಣಪತಿಗಳು ನಾವದಗೇರಿಯ ಮಾರ್ಗವಾಗಿ ಕಂದಗೂಳ ಸೇತುವೆ ಸ್ಥಳಕ್ಕೆ ತೆರಳಿದವು. ನಂತರ ಗಣಪತಿ ಮೂರ್ತಿಗಳನ್ನು ಮಾಂಜ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.