ADVERTISEMENT

ಗ್ರಾಮೀಣ ಪುಸ್ತಕ ಪ್ರಿಯರಿಗೆ ಹೈಟೆಕ್ ಗ್ರಂಥಾಲಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 3:14 IST
Last Updated 4 ಅಕ್ಟೋಬರ್ 2025, 3:14 IST
ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಸ್ಥಾಪನೆಯಾದ ಹೈಟೆಕ್ ಗ್ರಂಥಾಲಯ
ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಸ್ಥಾಪನೆಯಾದ ಹೈಟೆಕ್ ಗ್ರಂಥಾಲಯ   

ಔರಾದ್: ಗ್ರಾಮೀಣ ಪ್ರದೇಶದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯನಗುಂದಾ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ಸ್ಥಾಪನೆಯಾಗಿದೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಡಿ ಆರಂಭವಾದ ಈ ಗ್ರಂಥಾಲಯ ನೋಡುಗರಿಗೆ ಆಕರ್ಷಿಸುವುದರ ಜತೆಗೆ ಓದುಗರ ಮನ ತಣಿಸುವ ತಾಣವಾಗಿ ಪರಿಣಮಿಸಿದೆ. ಯನಗುಂದಾ ಸರ್ಕಾರಿ ಶಾಲೆಯಲ್ಲಿ ಸ್ಥಾಪನೆಯಾದ ಈ ಗ್ರಂಥಾಲಯ ವೈವಿಧ್ಯಮಯ ಬಣ್ಣಗಳ ಚಿತ್ರಗಳಿಂದ ಕಂಗೊಳಿಸುತ್ತಿದೆ.

ಆರು ಅಲ್ಮೇರಾಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪುಸ್ತಕಗಳು ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಅದರ ಎದುರು 20 ಕುರ್ಚಿ, 4 ರೀಡಿಂಗ್ ಟೇಬಲ್‌ಗಳು ಪುಸ್ತಕ ಪ್ರಿಯರಿಗೆ ಸಂತಸ ಇಮ್ಮಡಿಗೊಳಿಸಿದೆ. ಕಂಪ್ಯೂಟರ್ ಹಾಗೂ ಟೇಬಲ್‌ಗಳು ಲಭ್ಯವಿದ್ದು, ಸದ್ಯದಲ್ಲಿ ಇಂಟರ್ನೆಟ್ ವ್ಯವಸ್ಥೆ ಆಗಲಿದೆ.

ADVERTISEMENT

ಮಕ್ಕಳ ಕತೆ, ವಿಜ್ಞಾನ ಬೋಧನೆ, ಮಹನೀಯರ ಜೀವನ ಚರಿತ್ರೆ, ಕಾದಂಬರಿ, ಸ್ಪರ್ಧಾತ್ಮಕ ಪುಸ್ತಕಗಳು ಹಾಗೂ ಮಕ್ಕಳು ಮತ್ತು ಸಮುದಾಯ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದ್ದು, ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕ ಸಂತೋಷ ಭಾಲ್ಕೆ ತಿಳಿಸಿದರು.

‘ಈ ಗ್ರಂಥಾಲಯ ಪ್ರತಿ ವಾರಾಂತ್ಯ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಇದರ ಮೇಲ್ವಿಚಾರಣೆಗಾಗಿ ಸ್ವಸಹಾಯ ಸಂಘದ ಮಹಿಳೆಯೊಬ್ಬರನ್ನು ನೇಮಕ ಮಾಡಲಾಗಿದೆ. ಅವರಿಗೆ ಗ್ರಾಮ ಪಂಚಾಯಿತಿಯಿಂದ ದಿನಕ್ಕೆ ₹350 ಗೌರವಧನ ಪಾವತಿಸಲಾಗುವುದು. ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನ ಶಾಲಾ ಮಕ್ಕಳು ಗ್ರಂಥಾಲಯ ಬಳಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ.

‘ಗ್ರಂಥಾಲಯಕ್ಕೆ ಬೇಕಾಗುವ ಪುಸ್ತಕ, ಟೇಬಲ್, ಚೇರ್ ಎಲ್ಲವೂ ಸರ್ಕಾರದಿಂದ ನೀಡಲಾಗಿದೆ. ಇದಕ್ಕಾಗಿ ಬೇಕಾದ ಕಟ್ಟಡ, ನವೀಕರಣ ಕೆಲಸ, ವಿದ್ಯುತ್ ಸಂಪರ್ಕ, ಇಂಟರ್ನೆಟ್, ಕುಡಿಯುವ ನೀರು, ಫ್ಯಾನ್ ಸೇರಿದಂತೆ ಇತರೆ ವೆಚ್ಚ ಗ್ರಾಮ ಪಂಚಾಯಿತಿ ಭರಿಸಬೇಕು. ತಾಲ್ಲೂಕಿನಲ್ಲಿ ಈಗಾಗಲೇ ಮೂರು ಕಡೆ ಇಂತಹ ಗ್ರಾಮ ಗ್ರಂಥಾಲಯ ಸ್ಥಾಪಿಸಲಾಗಿದ್ದು, ಉಳಿದ 20 ಕಡೆ ಹಂತ ಹಂತವಾಗಿ ಆರಂಭವಾಗಲಿವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.