ADVERTISEMENT

ಕಲಾವಿದರ ಮೆರವಣಿಗೆ: ಸಾಂಸ್ಕೃತಿಕ ಲೋಕ ಸೃಷ್ಟಿ

ರಾಜ್ಯದ 31 ಜಿಲ್ಲೆಗಳ 41 ಕಲಾತಂಡಗಳು ಭಾಗಿ

ಚಂದ್ರಕಾಂತ ಮಸಾನಿ
Published 7 ಜನವರಿ 2023, 16:09 IST
Last Updated 7 ಜನವರಿ 2023, 16:09 IST
ಬೀದರ್‌ ಉತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಗಮನ ಸೆಳೆದ ಜಗ್ಗಲಗಿ ಮೇಳಪ್ರಜಾವಾಣಿ ಚಿತ್ರಗಳು: ಗುರುಪಾದಪ್ಪ ಸಿರ್ಸಿ
ಬೀದರ್‌ ಉತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಗಮನ ಸೆಳೆದ ಜಗ್ಗಲಗಿ ಮೇಳಪ್ರಜಾವಾಣಿ ಚಿತ್ರಗಳು: ಗುರುಪಾದಪ್ಪ ಸಿರ್ಸಿ   

ಬೀದರ್‌: ಜಿಲ್ಲಾಡಳಿತದ ವತಿಯಿಂದ ‘ಬೀದರ್ ಉತ್ಸವ’ದ ಅಂಗವಾಗಿ ಕಲಾವಿದರ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ರಾಜ್ಯದ 31 ಜಿಲ್ಲೆಗಳಿಂದ ಬಂದಿದ್ದ 41 ಕಲಾತಂಡಗಳು ವಿಭಿನ್ನ ಕಲೆಗಳ ಪ್ರದರ್ಶನ ನೀಡುವ ಮೂಲಕ ಸಾಂಸ್ಕೃತಿಕ ಲೋಕ ಸೃಷ್ಟಿಸಿದರು.

ಬೀದರ್‌ ಜಿಲ್ಲೆಗೆ ಮೊದಲ ಬಾರಿಗೆ ಬಂದಿದ್ದ ಜಗ್ಗಲಗಿ ಕಲಾವಿದರು ಬಹೃದಾಕಾರದ ಹಲಿಗೆಗಳನ್ನು ಉರುಳಿಸುತ್ತ ಕಿವಿ ಗಡಚ್ಚುವಂತೆ ಬಾರಿಸಿ ಸಾರ್ವಜನಿಕರ ಗಮನ ಸೆಳೆದರು. ದೊಡ್ಡ ಹಲಗೆಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಕಲಾವಿದರು ದೋತರ, ಹಳದಿ ಅಂಗಿ ಹಾಗೂ ಪೇಟಾ ಧರಿಸಿ ಕಲೆಯ ಮೆರಗು ಹೆಚ್ಚಿಸಿದರು.

ಹಲಗೆ ಮೇಳದವರು ದೈಹಿಕ ಕಸರತ್ತಿನ ಮೂಲಕ ಕಲೆಯ ಪ್ರದರ್ಶನ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಚಾಮರಾಜನಗರದ ಗೊರವ ಕುಣಿತ ತಂಡದ ಕಲಾವಿದರು ವೇಷ ಭೂಷಣದ ಮೂಲಕ ಪ್ರದರ್ಶನ ನೀಡಿದರು.

ADVERTISEMENT

ಮಹಿಳಾ ವೀರಗಾಸೆ, ಕಂಸಾಳೆ, ಚರ್ಮ ವಾದ್ಯ, ದಟ್ಟಿ ಕುಣಿತ, ಚಂಡಿ ವಾದನ, ಖಣಿವಾದನ, ವೀರಗಾಸೆ, ಹಗಲು ವೇಷ ಕಲಾವಿದರು, ಕೋಲಾಟ, ಲಂಬಾಣಿ ನೃತ್ಯ, ಹೆಜ್ಜೆ ಮೇಳ, ಪೂಜಾ ಕುಣಿತ, ಡೊಳ್ಳು ಕುಣಿತ, ಚರ್ಮವಾದ್ಯ, ಜಗ್ಗಲಗಿ, ಸಂಬಾಳ ವಾದನ, ಗೊಂಬೆ ಕುಣಿತ, ಗೊರವ ಕುಣಿತ ಉತ್ಸವಕ್ಕೆ ಮೆರಗು ನೀಡಿದವು.

ಕಲಾ ತಂಡಗಳು ನಾಲ್ಕೂವರೆ ಕಿ.ಮೀ ನಡೆದು ಆಕರ್ಷಕ ಪ್ರದರ್ಶನ ನೀಡಿದವು. ಮೆರವಣಿಗೆಯು ನೆಹರೂ ಕ್ರೀಡಾಂಗಣದಿಂದ ಆರಂಭವಾಘಿ ಅಂಬೇಡ್ಕರ್‌ ವೃತ್ತ, ಗವಾನ್‌ ಚೌಕ್ ಮಾರ್ಗವಾಗಿ ಬೀದರ್ ಕೋಟೆ ಆವರಣ ತಲುಪಿತು.

ಬೆಳಿಗ್ಗೆ ಕಲಾವಿದರ ಮೆರವಣಿಗೆಗೆ ಕೇಂದ್ರ ಸಚಿವ ಭಗವಂತ ಖೂಬಾ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಶಾಸಕ ರಹೀಂ ಖಾನ್, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ, ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ರಂಗ ಕಲಾವಿದ ಮಹೇಶ ಪಾಟೀಲ, ರಾಜೇಂದ್ರಕುಮಾರ ಗಂದಗೆ, ವಿರೂಪಾಕ್ಷ ಗಾದಗಿ, ಚೆನ್ನಬಸವ ಹೇಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.