ADVERTISEMENT

ಪತ್ರಕರ್ತನ ಮೇಲೆ ಕಾಡುಪ್ರಾಣಿ ದಾಳಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:29 IST
Last Updated 8 ಏಪ್ರಿಲ್ 2022, 15:29 IST

ಬೀದರ್: ತಾಲ್ಲೂಕಿನ ಜನವಾಡ ಸಮೀಪದ ಮಾಂಜ್ರಾ ನದಿ ದಂಡೆಯ ಮೇಲಿರುವ ಪಾಳು ಬಿದ್ದ ಪಂಪ್‌ಹೌಸ್‌ನ ವಿಡಿಯೊ ಚಿತ್ರಿಕರಣ ಮಾಡುತ್ತಿದ್ದ ಪತ್ರಕರ್ತನ ಮೇಲೆ ಕಾಡುಪ್ರಾಣಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

ಪ್ರಜಾಟಿವಿಯ ವರದಿಗಾರ ಸಂಜೀವಕುಮಾರ ಬುಕ್ಕಾ ಗಾಯಗೊಂಡರು. ಕಾಡುಪ್ರಾಣಿ ಅವರ ಮೈಪರಚಿದೆ. ಎಡಭುಜ ಹಾಗೂ ಕಾಲಿಗೆ ಗಾಯಗೊಳಿಸಿದೆ. ತುಟಿಸೀಳಿದ್ದು, ಹೊಲಿಗೆ ಹಾಕಲಾಗಿದೆ. ನಗರದ ಬ್ರಿಮ್ಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪಂಪ್‌ಹೌಸ್ ವಿಡಿಯೊಚಿತ್ರಿಕರಣ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ. ನಾನು ಭಯದಿಂದ ಜೋರಾಗಿ ಕಿರುಚಲು ಶುರು ಮಾಡಿದಾಗ ಓಡಿ ಹೋಗಿದೆ’ ಎಂದು ಸಂಜೀವಕುಮಾರ ತಿಳಿಸಿದರು.

ADVERTISEMENT

‘ತುಟಿ ಹಾಗೂ ಭುಜದಿಂದ ರಕ್ತ ಹರಿಯುತ್ತಿದ್ದಾಗ ಪ್ರಯಾಸಪಟ್ಟು ಜನವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದೆ. ಅಲ್ಲಿನ ವೈದ್ಯಕೀಯ ಸಿಬ್ಬಂದಿ ನನ್ನ ನೆರವಿಗೆ ಬರಲಿಲ್ಲ. ಪ್ರಥಮ ಚಿಕಿತ್ಸೆಯನ್ನೂ ಕೊಡಲಿಲ್ಲ. ಸಂಬಂಧಿಕರೊಬ್ಬರಿಗೆ ಕರೆ ಮಾಡಿದಾಗ ತಕ್ಷಣ ಅವರು ಜನವಾಡಕ್ಕೆ ಬಂದು ನನ್ನನ್ನು ಬೀದರ್‌ಗೆ ಕರೆ ತಂದು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರು’ ಎಂದು ಹೇಳಿದರು.

‘ಪತ್ರಕರ್ತನ ಮೇಲೆ ಕತ್ತೆಕಿರುಬದಾಳಿ ಮಾಡಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಚಿರತೆ ಇಲ್ಲ. ಸ್ಥಳ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿಲ್ಲ. ಆದರೂ, ದಾಳಿ ಮಾಡಿದ ಕಾಡು ಪ್ರಾಣಿಯ ಅರಿತುಕೊಳ್ಳಲು ಪಂಪ್‌ಹೌಸ್‌ ಬಳಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುತ್ತಮುತ್ತ ಯಾವುದೇ ಕಾಡು ಪ್ರಾಣಿ ಕಂಡು ಬಂದರೂ ಮಾಹಿತಿ ನೀಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೂಚಿಸಲಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಮೋರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.