ಬೀದರ್: ಐದು ತಿಂಗಳ ಹಿಂದೆ ಉದ್ಘಾಟನೆಗೊಂಡ ನಗರದ ಜನವಾಡ ರಸ್ತೆಯ ಸುಸಜ್ಜಿತ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಬೀದರ್ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಸ್ಥಳಾಂತರಕ್ಕೆ ನಿರ್ಧರಿಸಲಾಗಿದ್ದು, ಇಕ್ಕಟ್ಟಿನಲ್ಲಿ ಲೈಬ್ರರಿ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದ ಮ್ಯಾಕ್ರೊ ಯೋಜನೆ ಅಡಿಯಲ್ಲಿ ₹2.50 ಕೋಟಿಯಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗಿದೆ. ಈ ವರ್ಷದ ಫೆಬ್ರುವರಿ 12ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಇದರ ಉದ್ಘಾಟನೆ ನೆರವೇರಿಸಿದ್ದರು. ನೆಲಮಹಡಿಯಲ್ಲಿ ಜಿಲ್ಲಾ ಗ್ರಂಥಾಲಯ ಮತ್ತು ಮೊದಲ ಮಹಡಿಯಲ್ಲಿ ನಗರ ಕೇಂದ್ರ ಗ್ರಂಥಾಲಯ ಆರಂಭಗೊಂಡಿತ್ತು.
ಕಟ್ಟಡದಲ್ಲಿ ತಾಂತ್ರಿಕ ವಿಭಾಗ, ಪುಸ್ತಕ ವಿಭಾಗ, ದಿನಪತ್ರಿಕೆ ಮತ್ತು ನಿಯತಕಾಲಿಕೆ ವಿಭಾಗ, ಮಕ್ಕಳ ಗ್ರಂಥಾಲಯ ವಿಭಾಗ ಮತ್ತು ಪರಾಮರ್ಶನ ವಿಭಾಗ ಸೇರಿದಂತೆ ಎಲ್ಲ ಓದುಗರನ್ನು ಗಮನದಲ್ಲಿ ಇಟ್ಟುಕೊಂಡು ಪುಸ್ತಕಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ದಿನಪತ್ರಿಕೆಗಳು, ಮಾಸಪತ್ರಿಕೆಗಳು, ಸ್ಪರ್ಧಾತ್ಮಕ ಪುಸ್ತಕಗಳು, ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳನ್ನು ಇರಿಸಲಾಗಿತ್ತು. ಇಲ್ಲಿನ ವ್ಯವಸ್ಥೆ ನೋಡಿ ಓದುಗರು ಖುಷಿಪಟ್ಟಿದ್ದರು. ಆದರೆ, ಐದು ತಿಂಗಳಲ್ಲೇ ಆ ಖುಷಿ ಹೋಗಿದೆ.
ಮೊದಲ ಮಹಡಿಗೆ ಎಸಿ ಕಚೇರಿ ಬರುತ್ತಿರುವುದರಿಂದ ನಗರ ಕೇಂದ್ರ ಗ್ರಂಥಾಲಯದ 30 ಸಾವಿರ ಪುಸ್ತಕಗಳನ್ನು ನೆಲಮಹಡಿಯ ಗ್ರಂಥಾಲಯಕ್ಕೆ ಸ್ಥಳಾಂತರಿಸಲಾಗಿದೆ. ಮೂಟೆಗಳಲ್ಲಿ ಪುಸ್ತಕಗಳನ್ನು ಕಟ್ಟಿ ಇಡಲಾಗಿದೆ. ಓದುಗರಿಗೆ ಮೀಸಲಿಟ್ಟಿರುವ ಕೊಠಡಿಯಲ್ಲೇ ಪುಸ್ತಕಗಳ ಮೂಟೆಗಳನ್ನು ಇಟ್ಟಿರುವುದರಿಂದ ಜಾಗ ಇಕ್ಕಟ್ಟಾಗಿದೆ. ಇದರಿಂದ ಓದುಗರಿಗೆ ಕಿರಿಕಿರಿ ಉಂಟಾಗುತ್ತಿದೆ.
ನೆಲಮಹಡಿಯಲ್ಲಿ ಜಿಲ್ಲಾ ಗ್ರಂಥಾಲಯ ಇರುವುದರಿಂದ ಇಡೀ ಜಿಲ್ಲೆಯ ಎಲ್ಲ ಗ್ರಂಥಾಲಯಗಳ ಪುಸ್ತಕಗಳು ಇಲ್ಲಿಗೆ ಬರುತ್ತವೆ. ಅವುಗಳನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಲಾಗುತ್ತದೆ. ಕಚೇರಿ ಸಂಬಂಧಿತ ಕೆಲಸಕ್ಕೆ ಜನ ಬಂದು ಹೋಗುತ್ತಿರುತ್ತಾರೆ. ಇದರೊಂದಿಗೆ ಈಗ ಮೊದಲ ಮಹಡಿಯ 30 ಸಾವಿರ ಪುಸ್ತಕಗಳನ್ನು ಹೊಂದಿಸಿ ಇಡುವ ಸವಾಲು ಎದುರಾಗಿದೆ.
‘ಎರಡ್ಮೂರು ವರ್ಷಗಳ ನಂತರ ಹೊಸ ಕಟ್ಟಡ ನಿರ್ಮಾಣಗೊಂಡಿತ್ತು. ಯೋಜನಾಬದ್ಧವಾಗಿ ಗ್ರಂಥಾಲಯ ನಿರ್ಮಿಸಿದ್ದಾರೆ. ನಾನು ಸೇರಿದಂತೆ ಹಲವರು ಕಳೆದ ಐದು ತಿಂಗಳಿಂದ ಓದಲು ಬರುತ್ತಿದ್ದೇವೆ. ಆದರೆ, ಏಕಾಏಕಿ ಈಗ ಎಸಿ ಕಚೇರಿ ಇಲ್ಲಿಗೆ ತರುತ್ತಿದ್ದಾರೆ. ಗ್ರಂಥಾಲಯ ಗ್ರಂಥಾಲಯಕ್ಕಾಗಿಯೇ ಮೀಸಲಿಟ್ಟರೆ ಉತ್ತಮ. ಬೇರೆ ಕಚೇರಿಗಳು, ಪುಸ್ತಕಗಳನ್ನು ಬೇಕಾಬಿಟ್ಟಿ ಇಟ್ಟಿರುವ ಕಾರಣ ಕಿರಿಕಿರಿ ಅನಿಸುತ್ತಿದೆ. ಎಸಿ ಕಚೇರಿ ಶುರುವಾದ ನಂತರ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಓದುವ ಪರಿಸರವೇ ಅಲ್ಲಿರುವುದಿಲ್ಲ. ಎಸಿ ಕಚೇರಿಗೆ ಗ್ರಂಥಾಲಯದ ಬದಲು ಬೇರೊಂದು ಕಡೆ ಆಯ್ಕೆ ಮಾಡಿಕೊಂಡಿದ್ದರೆ ಉತ್ತಮ’ ಎಂದು ಸ್ಥಳೀಯರಾದ ರಾಜೇಶ, ಉಮಾ ಎಂಬುವರು ಹೇಳಿದರು.
‘ಹೊಸ ಡಿಸಿ, ಎಸಿ ಕಚೇರಿ ನಿರ್ಮಿಸುತ್ತಿರುವ ಕಾರಣ ಎಸಿ ಕಚೇರಿ ಗ್ರಂಥಾಲಯದ ಮೊದಲ ಮಹಡಿಗೆ ಸ್ಥಳಾಂತರಿಸಲಾಗುತ್ತಿದೆ. ನೆಲಮಹಡಿಯಲ್ಲಿ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮುಖ್ಯಾಂಶಗಳು... * ಐದು ತಿಂಗಳ ಹಿಂದೆ ಉದ್ಘಾಟನೆ * ₹2.50 ಕೋಟಿಯಲ್ಲಿ ನಿರ್ಮಾಣ * ಮೂಟೆಗಳಲ್ಲಿ 30 ಸಾವಿರ ಪುಸ್ತಕ
ಓದುಗರಿಗೆ ಆಗುತ್ತಿರುವ ತೊಂದರೆ ಮನಗಂಡು ಕಚೇರಿ ವಿಭಾಗದ ದೊಡ್ಡ ಕೊಠಡಿ ಬಿಟ್ಟು ಕೊಡಲಾಗಿದೆ. ಈಗಾಗಲೇ ಮೊದಲ ಮಹಡಿಯಲ್ಲಿದ್ದ ಬಹುತೇಕ ಪುಸ್ತಕಗಳನ್ನು ಕೆಳಗೆ ಸ್ಥಳಾಂತರಿಸಲಾಗಿದೆ.–ಸಿದ್ದಾರ್ಥ ಜಿಲ್ಲಾ ಗ್ರಂಥಾಲಯ ಅಧಿಕಾರಿ
ಎಸಿ ಕಚೇರಿ ಬರುತ್ತಿರುವ ಕಾರಣ ಗ್ರಂಥಾಲಯವನ್ನು ಮೊದಲ ಮಹಡಿಯಿಂದ ಕೆಳಗೆ ಸ್ಥಳಾಂತರ ಮಾಡಲಾಗಿದೆ. ನಗರ ಹಾಗೂ ಜಿಲ್ಲಾಮಟ್ಟದ ಕೇಂದ್ರ ಗ್ರಂಥಾಲಯ ನೆಲಮಹಡಿಯಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುತ್ತಿವೆ.–ಸವಿತಾ ಎನ್.ಎಮ್. ಮುಖ್ಯ ಗ್ರಂಥಾಲಯ ಅಧಿಕಾರಿ ನಗರ ಕೇಂದ್ರ ಗ್ರಂಥಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.