ADVERTISEMENT

ಶಾಲೆ ಬಿಟ್ಟವರಿಗೆ ಬೆಳಕಾದ ‘ಎಐಸಿಯು’

ಮೂರು ಸಾವಿರ ‘ಡ್ರಾಪ್‌ಔಟ್‌’ ಮಕ್ಕಳು ಮುಖ್ಯವಾಹಿನಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಜುಲೈ 2024, 23:04 IST
Last Updated 17 ಜುಲೈ 2024, 23:04 IST
ಅಬ್ದುಲ್‌ ಖದೀರ್‌
ಅಬ್ದುಲ್‌ ಖದೀರ್‌   

ಬೀದರ್‌: ಬಡತನ ಸೇರಿದಂತೆ ವಿವಿಧ ಕಾರಣಗಳಿಂದ ಮಧ್ಯದಲ್ಲೇ ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ನಗರದ ಶಾಹೀನ್‌ ಶಿಕ್ಷಣ ಸಂಸ್ಥೆಯ ‘ಅಕಾಡೆಮಿಕ್‌ ಇನ್‌ಟೆನ್ಸಿವ್‌ ಕೇರ್‌ ಯುನಿಟ್‌’ (ಎಐಸಿಯು) ಬೆಳಕಾಗಿದೆ.

ಕಡು ಬಡತನದ ಕಾರಣಕ್ಕಾಗಿ ಶಾಲೆಗೆ ಹೋಗದವರು, ಫೇಲಾಗಿ ಅರ್ಧದಲ್ಲಿಯೇ ಶಾಲೆ ಬಿಟ್ಟವರು, ಓದಿನಲ್ಲಿ ಹಿಂದುಳಿದವರು, ಕೀಳರಿಮೆಯಿಂದ ಶಾಲೆ ತೊರೆದ ವಿದ್ಯಾರ್ಥಿಗಳಿಗೆ ‘ಎಐಸಿಯು’ನಲ್ಲಿ ಕಲಿಸಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಸಾಮರ್ಥ್ಯವನ್ನು ಬೆಳೆಸಲಾಗುತ್ತಿದೆ. ಎಐಸಿಯುನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ಎಂಬಿಬಿಎಸ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

15 ವರ್ಷಗಳ ಹಿಂದೆ ಆರಂಭಗೊಂಡ ‘ಎಐಸಿಯು’ನಲ್ಲಿ ಇದುವರೆಗೆ ಮೂರು ಸಾವಿರ ಡ್ರಾಪ್‌ಔಟ್‌ ಮಕ್ಕಳಿಗೆ ಶಿಕ್ಷಣ ಕೊಟ್ಟು ಮುಖ್ಯವಾಹಿನಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ತರಗತಿಗಳಲ್ಲಿ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲದೇ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳ ಬಡ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ADVERTISEMENT

ಒಂದರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ‘ಎಐಸಿಯು’ನಲ್ಲಿ ಪಾಠ ಮಾಡಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಮಕ್ಕಳನ್ನು ನಿರ್ದಿಷ್ಟ ತರಗತಿಗಳಿಗೆ ಆಯ್ಕೆ ಮಾಡಿ ಕಲಿಸಲಾಗುತ್ತದೆ. ಕೆಲವರು ನೇರವಾಗಿ ಒಂಬತ್ತನೇ ತರಗತಿಗೆ ಪ್ರವೇಶ ಪಡೆದು, ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸಿದ್ದಾರೆ. ಆರು ಮಕ್ಕಳಿಗೆ ಒಬ್ಬ ಶಿಕ್ಷಕ ಪಾಠ ಮಾಡುತ್ತಾರೆ. ರೌಂಡ್‌ ಟೇಬಲ್‌ ಮಾದರಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೇಳಿಕೊಡಲಾಗುತ್ತದೆ. ಪ್ರತಿಯೊಬ್ಬರ ಕಲಿಕೆಯ ಸಾಮರ್ಥ್ಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪಾಠ ಮಾಡಲಾಗುತ್ತದೆ. ಓದಿನಲ್ಲಿ ಎಷ್ಟೇ ದುರ್ಬಲವಾಗಿದ್ದರೂ ಒಂದು ವರ್ಷದೊಳಗೆ ಓದಲು, ಬರೆಯುವಂತೆ ಮಾಡಿ, ಪರೀಕ್ಷೆಗೆ ಅಣಿಗೊಳಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆ ಮೇಲೆ ವಿಶೇಷ ನಿಗಾ ವಹಿಸಲು ‘ಫಾಸ್ಟ್‌ ಟ್ರ್ಯಾಕ್‌ ಅಪ್ರೋಚ್‌’ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿಯೇ ಇದಕ್ಕೆ ‘ಎಐಸಿಯು’ ಎಂದು ಹೆಸರಿಡಲಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಖಾಸಗಿ ಶಾಲಾ–ಕಾಲೇಜುಗಳು ಬುದ್ಧಿವಂತ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ಕೊಡುತ್ತಿವೆ. ಬುದ್ಧಿವಂತ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸಿ, ಅವರನ್ನು ಸೇರಿಸಿಕೊಂಡು ಹೆಚ್ಚಿನ ರ್‍ಯಾಂಕ್‌ ತೋರಿಸಿ ಅವರ ಸಂಸ್ಥೆಯ ಕೀರ್ತಿ ಹೆಚ್ಚಿಸಿಕೊಳ್ಳುತ್ತಿವೆ. ಕಲಿಕೆಯಲ್ಲಿ ಹಿಂದುಳಿದವರು, ಕಡಿಮೆ ಅಂಕ ಗಳಿಸಿದವರು, ಅದರಲ್ಲೂ ಫೇಲಾದವರಿಗೆ ಪ್ರವೇಶ ಕೊಡುತ್ತಿಲ್ಲ. ಆದರೆ, ನಮ್ಮ ಸಂಸ್ಥೆಯಲ್ಲಿ ಈ ವರ್ಗದ ಮಕ್ಕಳ ಕಲಿಕೆಗೆ ವಿಶೇಷ ಒತ್ತು ಕೊಡಲಾಗುತ್ತಿದೆ’ ಎಂದು ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಖದೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದರಸಾಗಳಲ್ಲಿ ಮಕ್ಕಳಿಗೆ ಅರೇಬಿಕ್‌ ಧಾರ್ಮಿಕ ಸಾಹಿತ್ಯ ಬಿಟ್ಟರೆ ಅನ್ಯ ಜ್ಞಾನ ಸಿಗುವುದಿಲ್ಲ. ಆದಕಾರಣ ಆರಂಭದಲ್ಲಿ ಮದರಸಾಗಳಲ್ಲಿ ಓದಿದ ಮಕ್ಕಳಿಗಷ್ಟೇ ‘ಎಐಸಿಯು’ನಲ್ಲಿ ಪಾಠ ಮಾಡುತ್ತಿದ್ದೆವು. ಆದರೆ, ಕಳೆದ ಹತ್ತು ವರ್ಷಗಳಿಂದ ಎಲ್ಲ ಸಮುದಾಯದ ಶಿಕ್ಷಣ ವಂಚಿತ ಮಕ್ಕಳಿಗೆ ಪ್ರವೇಶ ಕೊಡಲಾಗುತ್ತಿದೆ. ಬಾಲಕ/ಬಾಲಕಿಯರಿಬ್ಬರಿಗೂ ಅವಕಾಶ ಇದೆ. ಕನ್ನಡ ಭಾಷೆಯ ಬಗ್ಗೆ ಏನೂ ಗೊತ್ತಿಲ್ಲದವರಿಗೆ ನುರಿತ ಶಿಕ್ಷಕರಿಂದ 60 ದಿನಗಳಲ್ಲಿ ಕನ್ನಡ ಓದಲು, ಬರೆಯಲು ಕಲಿಸುತ್ತೇವೆ. ಆನಂತರ ಗಣಿತ, ವಿಜ್ಞಾನ, ಸಮಾಜ ಸೇರಿದಂತೆ ಇತರೆ ಎಲ್ಲ ವಿಷಯಗಳನ್ನು ಹೇಳಿ ಕೊಡುತ್ತೇವೆ. ಯಾವುದೇ ವಿದ್ಯಾರ್ಥಿ ಓದಿನಲ್ಲಿ ಎಷ್ಟೇ ಹಿಂದೆ ಇದ್ದರೂ ಒಂದು ವರ್ಷದೊಳಗೆ ಅವರಲ್ಲಿ ಓದಿನ ಅಭಿರುಚಿ ಮೂಡಿಸುತ್ತೇವೆ. ಪ್ರತಿ ವಿದ್ಯಾರ್ಥಿ ಕನಿಷ್ಠ ಪದವೀಧರನಾಗಬೇಕೆಂಬುದು ನಮ್ಮ ಕನಸು. ಇದಕ್ಕಾಗಿಯೇ ಎಐಸಿಯು ಹುಟ್ಟು ಹಾಕಲಾಗಿದೆ’ ಎಂದು ಅವರು ಕಾರಣ ಬಿಚ್ಚಿಟ್ಟರು.

ಬೀದರ್‌ನ ಶಾಹೀನ್‌ ಶಿಕ್ಷಣ ಸಂಸ್ಥೆಯ ‘ಎಐಸಿಯು’ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವುದು
ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಸದಾಶಯದಿಂದ ‘ಎಐಸಿಯು’ ನಡೆಸುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕರೆ ಸ್ವಾವಲಂಬಿಗಳಾಗುತ್ತಾರೆ.
–ಅಬ್ದುಲ್‌ ಖದೀರ್‌ ಅಧ್ಯಕ್ಷ ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.