ADVERTISEMENT

ಸುಳ್ಳು ಜಾತಿ ಪ್ರಮಾಣ ಪತ್ರ ತಡೆಗೆ ಕ್ರಮ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:37 IST
Last Updated 5 ಡಿಸೆಂಬರ್ 2020, 15:37 IST
ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ವಿತರಣೆ ತಡೆಗೆ ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಬೀದರ್‌ನಲ್ಲಿ ಶನಿವಾರ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ವಿತರಣೆ ತಡೆಗೆ ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಬೀದರ್‌ನಲ್ಲಿ ಶನಿವಾರ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್: ಕೆಲ ಮೇಲ್ಜಾತಿಯವರು ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸಮಿತಿಯ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ನಿಯೋಗದಲ್ಲಿ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.

ಹಿಂದೂ ಲಿಂಗಾಯತ, ಹಿಂದೂ ಜಂಗಮ, ಹಿಂದೂ ರಜಪೂತ್ ಸಮುದಾಯಕ್ಕೆ ಸೇರಿದ ಕೆಲವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬೇಡ ಜಂಗಮ, ಭೋವಿ ಹಾಗೂ ಮಾಲಾ ಜಂಗಮ ಪದಗಳನ್ನು ದುರುಪಯೋಗ ಪಡೆಸಿಕೊಂಡು, ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ, ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇದಕ್ಕೆ ರವೀಂದ್ರ ಕಲ್ಲಯ್ಯ ಸ್ವಾಮಿ ಅವರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿರುವುದೇ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೇಡ ಜಂಗಮ, ಭೋವಿ ಹಾಗೂ ಮಾಲಾ ಜಂಗಮ ಪದಗಳನ್ನು ದುರುಪಯೋಗ ಪಡೆಸಿಕೊಂಡು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಸಾಧ್ಯತೆ ಇರುವ ಕಾರಣ ಸುಳ್ಳು ಜಾತಿ ಪ್ರಮಾಣ ಪತ್ರ ತಡೆಗೆ ತಹಶೀಲ್ದಾರರಿಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಜಿಲ್ಲಾ ಸಂಚಾಲಕ ಓಂಪ್ರಕಾಶ ಭಾವಿಕಟ್ಟಿ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ವಿಭಾಗೀಯ ಸಂಚಾಲಕ ರವಿಕುಮಾರ ವಾಘಮಾರೆ, ಅಖಿಲ ಕರ್ನಾಟಕ ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅಭಿ ಕಾಳೆ, ಕರ್ನಾಟಕ ಸ್ವಾಭಿಮಾನಿ ಭೋವಿ ವಡ್ಡರ ವೇದಿಕೆಯ ರಾಜ್ಯ ಅಧ್ಯಕ್ಷ ಸಂತೋಷ ಏಣಕೂರೆ, ಕೋರವಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಕಮಠಾಣ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.