ADVERTISEMENT

ಪರಿಶಿಷ್ಟ ಜಾತಿ ಪಟ್ಟಿಗೆ ಗೋಂಧಳಿ ಸಮುದಾಯ ಸೇರಿಸಿ

ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಜೇಂದ್ರ ವನಾರಸೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:25 IST
Last Updated 8 ಏಪ್ರಿಲ್ 2022, 15:25 IST

ಬೀದರ್: ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಗೋಂಧಳಿ ಸಮಾಜಕ್ಕೆ ರಾಜಕೀಯ ಪಕ್ಷಗಳು ರಾಜಕೀಯ ಪ್ರಾತಿನಿಧ್ಯ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಗೋಂಧಳಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಖಿಲ ಭಾರತೀಯ ಗೋಂಧಳಿ ಸಮಾಜದ ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಜೇಂದ್ರ ವನಾರಸೆ ಆಗ್ರಹಿಸಿದರು.

ಗೋಂಧಳಿ ಸಮಾಜವನ್ನು ರಾಜಕೀಯವಾಗಿ ಅಸ್ಪೃಷ್ಯ ರೀತಿಯಲ್ಲಿ ದೂರಿಡಲಾಗಿದೆ. ಸಮಾಜಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಪ್ರವರ್ಗ 1ರಲ್ಲಿ 46 ಜಾತಿಗಳಿರುವ ಕಾರಣ ಪ್ರಬಲ ಜಾತಿಗಳು ಸೌಲಭ್ಯವನ್ನು ಬಾಚಿಕೊಳ್ಳುತ್ತಿವೆ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಭವಾನಿ. ದುರ್ಗಾ ಮಾತೆಯ ಆರಾಧಕರಾಗಿರುವ ಗೋಂಧಳಿ ಸಮಾಜದವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕತೆಗಳನ್ನು ಹೇಳಿ ಭಕ್ತರು ಕೊಡುವ ಅಲ್ಪ ಕಾಣಿಕೆ ಸ್ವೀಕರಿಸಿ ಬದುಕು ಸಾಗಿಸಿದ್ದಾರೆ. ಸಾಮಾಜಿಕವಾಗಿ ಪ್ರಗತಿ ಸಾಧಿಸಲು ರಾಜಕೀಯ ಅಧಿಕಾರ ಅಗತ್ಯವಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳು ರಾಜ್ಯಸಭೆ, ವಿಧಾನ ಪರಿಷತ್ತಿಗೆ ಗೋಂಧಳಿ ಸಮಾಜದವರನ್ನು ನೇಮಕ ಮಾಡಬೇಕು. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

1980ರಿಂದ ಸಮಾಜ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೇವೆ. ರಾಜ್ಯದಲ್ಲಿ ಗೋಂಧಳಿ ಸಮಾಜದ ಜನಸಂಖ್ಯೆ 5 ಲಕ್ಷ ಇದೆ. ಬೀದರ್‌ ಜಿಲ್ಲೆಯಲ್ಲಿ 20 ಸಾವಿರ ಜನ ವಾಸವಾಗಿದ್ದಾರೆ. 2016ರಲ್ಲಿ ಒಂದು ರಾಷ್ಟ್ರೀಯ ಸಮಾವೇಶ ನಡೆಸಲಾಗಿದೆ. ಇದೇ ಮೇ 29ರಂದು ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಸಮವೇಶ ನಡೆಸಲಾಗುವುದು‘ ಎಂದು ಅಖಿಲ ಭಾರತೀಯ ಗೊಂಧಳಿ ಸಮಾಜ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ರಾಮ ವಾಘಮಾರೆ ತಿಳಿಸಿದರು.

ಗೋಂಧಳಿ ಸಮಾಜವನ್ನು ರಾಷ್ಟ್ರಮಟ್ಟದಲ್ಲಿ ಬಲಪಡಿಸುವುದು ಹಾಗೂ ಸಮಾಜದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್ ನವಲಕೆಲೆ, ರಾಷ್ಟ್ರೀಯ ಮಂಡಳಿ ಸದಸ್ಯ ಸುರೇಶ ಕಾಳೆ, ಮಾಣಿಕರಾವ್ ಕಾಟೆ, ಅಂಬಾದಾಸರಾವ್ ಪಾಚಂಗೆ, ರವಿ ಪಾಠಕ್, ಗಣೇಶ ಕಾಳೆ, ನಿತಿನ ನವಲಕೆಲೆ, ರಾಜವರ್ಧನ ಬರೂರಕರ್, ವಿಜಯಕುಮಾರ ಪಾಚಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.