ADVERTISEMENT

1.54 ಲಕ್ಷ ರೈತರಿಗೆ ₹124.53 ಕೋಟಿ ಹೆಚ್ಚುವರಿ ಸಾಲ: ಉಮಾಕಾಂತ ನಾಗಮಾರಪರಳ್ಳಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:08 IST
Last Updated 26 ಜೂನ್ 2020, 15:08 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ   

ಬೀದರ್: ರೈತರ ಏಳಿಗೆಯೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗುರಿಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.

1922ರಲ್ಲಿ ಆರಂಭಿಸಿರುವ ಬ್ಯಾಂಕ್ ಒಟ್ಟು ₹ 118.10 ಕೋಟಿ ಷೇರು ಬಂಡವಾಳ ಹೊಂದಿದೆ. ₹. 292.46 ಕೋಟಿ ಕಾಯ್ದಿಟ್ಟ ನಿಧಿ ಸೇರಿ ಸ್ವಂತ ಬಂಡವಾಳ ₹ 410.56 ಕೋಟಿ ಇದೆ. ಠೇವಣಿ ₹ 1,796.28 ಕೋಟಿ ಆಗಿದ್ದು, ಸಾಲದ ಹೊರ ಬಾಕಿ ₹. 2,298.35 ಕೋಟಿ ಇದೆ. ಹೂಡಿಕೆಗಳು ₹. 678.66 ಕೋಟಿ ಆಗಿದ್ದು, ಒಟ್ಟು ₹. 3,214.88 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹ 7.07 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ರೈತಾಪಿ ವರ್ಗವನ್ನೂ ಸಂಕಷ್ಟಕ್ಕೆ ತಳ್ಳಿದೆ. ಇದನ್ನು ಅರಿತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರು ಈಗಾಗಲೇ ಹೊಂದಿರುವ ಬೆಳೆ ಸಾಲಕ್ಕೆ ಶೇ 10 ರಷ್ಟು ಹೆಚ್ಚುವರಿ ಸಾಲ ವಿತರಿಸಲು ನಿರ್ಧರಿಸಿದೆ. ಕೃಷಿ ಚಟುವಟಿಕೆ ಪುನರ್ ಆರಂಭವಾಗಲಿ ಎನ್ನುವ ಸದುದ್ದೇಶದಿಂದ ಹೆಚ್ಚುವರಿ ಬೆಳೆ ಸಾಲ ವಿತರಿಸಲು ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, 1,54,868 ಜನ ರೈತರಿಗೆ ₹124.53 ಕೋಟಿ ಹೆಚ್ಚುವರಿ ಸಾಲ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಬ್ಯಾಂಕ್ ಶ್ರಮದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಯಾದ 8,05,001 ರೈತರ ಅರ್ಜಿಗಳು ₹ 48.61 ಕೋಟಿ ಪ್ರಿಮಿಯಂ ಪಾವತಿಸಿವೆ. ಈ ಪೈಕಿ 2016-17, 2018-19ರಲ್ಲಿ ಬೆಳೆ ನಷ್ಟವಾಗಿ, ರೈತರಿಗೆ ಬೆಳೆ ವಿಮೆಯ ಪರಿಹಾರದ ಮೊತ್ತವಾಗಿ ₹ 302.08 ಕೋಟಿ ಲಭಿಸಿದ್ದು, ಜಿಲ್ಲೆಯ 2,58,016 ರೈತರು ಲಾಭ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್ ಒಟ್ಟು ₹ 98.79 ಕೋಟಿ ರಸಗೊಬ್ಬರದ ವಹಿವಾಟು ನಡೆಸಿದೆ. ಪ್ರಸಕ್ತ ಸಾಲಿನಲ್ಲಿ ₹ 32 ಕೋಟಿ ವಹಿವಾಟು ನಡೆಸಿದೆ. ಡಿಸಿಸಿ ಬ್ಯಾಂಕ್ ವತಿಯಿಂದ ರೈತರ ಮನೆ ಬಾಗಿಲಿದೆ ಗೊಬ್ಬರ ತಲುಪಿಸಲಾಗುತ್ತಿದೆ. ಮುಂಗಾರು ಆರಂಭವಾಗುವ ಮುನ್ನವೇ ಪಿಕೆಪಿಎಸ್‍ಗಳ ಸ್ವಂತ ಗೋದಾಮುಗಳಲ್ಲಿ ಗೊಬ್ಬರ ದಾಸ್ತಾನು ಮಾಡಿ, ರೈತರಿಗೆ ತಲುಪಿಸುವ ವ್ಯವಸ್ಥೆ ಇಡೀ ರಾಜ್ಯದಲ್ಲೇ ಬೀದರ್‌ನಲ್ಲಿ ಮಾತ್ರ ಇದೆ. ಈ ಮಾದರಿಯನ್ನೇ ರಾಜ್ಯದಾದ್ಯಂತ ಜಾರಿ ತರಲು ಸರ್ಕಾರ ಚಿಂತನೆ ನಡೆಸಿದೆ. ಡಿಸಿಸಿ ಬ್ಯಾಂಕ್‍ನ ಪ್ರಯತ್ನದಿಂದಾಗಿ ಜಿಲ್ಲೆಯ ರೈತರಿಗೆ ಗೊಬ್ಬರದ ಕೊರತೆಯೇ ಆಗದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.