ADVERTISEMENT

ಸರ್ಕಾರಿ ಶಾಲೆಗಳ ದುರಾವಸ್ಥೆಗೆ ಆಡಳಿತ ವ್ಯವಸ್ಥೆಯೇ ಕಾರಣ

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:02 IST
Last Updated 11 ಜೂನ್ 2019, 16:02 IST
ಬೀದರ್‌ನ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ಕನ್ನಡ ಪಠ್ಯ ಬೋಧನೆ ಮತ್ತು ತರಬೇತಿ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಉದ್ಘಾಟಿಸಿದರು. ಸಣ್ಣಪಾಪಯ್ಯ, ಟಿ.ಆರ್‌. ದೊಡ್ಡೆ, ಪ್ರೊ.ಕೆ.ಆರ್. ದುರ್ಗಾದಾಸ್, ಸಕ್ರಪ್ಪಗೌಡ ಬಿರಾದಾರ ಹಾಗೂ ಬಾಬುರಾವ್‌ ಇದ್ದಾರೆ
ಬೀದರ್‌ನ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ಕನ್ನಡ ಪಠ್ಯ ಬೋಧನೆ ಮತ್ತು ತರಬೇತಿ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಉದ್ಘಾಟಿಸಿದರು. ಸಣ್ಣಪಾಪಯ್ಯ, ಟಿ.ಆರ್‌. ದೊಡ್ಡೆ, ಪ್ರೊ.ಕೆ.ಆರ್. ದುರ್ಗಾದಾಸ್, ಸಕ್ರಪ್ಪಗೌಡ ಬಿರಾದಾರ ಹಾಗೂ ಬಾಬುರಾವ್‌ ಇದ್ದಾರೆ   

ಬೀದರ್: ‘ಸರ್ಕಾರಿ ಶಾಲೆಗಳ ದುರಾವಸ್ಥೆಗೆ ಸರ್ಕಾರದ ಆಡಳಿತ ವ್ಯವಸ್ಥೆಯೇ ಕಾರಣ’ ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಹೇಳಿದರು.

ಇಲ್ಲಿನ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿರುವ ಕನ್ನಡ ಪಠ್ಯ ಬೋಧನೆ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲೇ ಕಳೆದು ಹೋಗುತ್ತಿದ್ದಾರೆ. ಮಕ್ಕಳ ಪಾಠ ಬೋಧನೆ ಹಾಗೂ ಕಲಿಕಾ ಮಟ್ಟದ ಬಗ್ಗೆ ಒಬ್ಬ ಅಧಿಕಾರಿ ಗಮನ ಹರಿಸುತ್ತಿಲ್ಲ. ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರು ಒಂದು ಶಾಲೆಗೂ ಭೇಟಿ ಕೊಟ್ಟ ಉದಾಹರಣೆ ಇಲ್ಲ. ಅಂತೆಯೇ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇಂದು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ. ಬಿಸಿಯೂಟ ಪೂರೈಕೆ ಹಾಗೂ ಶೌಚಾಲಯ ನಿರ್ಮಾಣ ಕುರಿತು ಮಾತ್ರ ಪ್ರಗತಿ ಪರಿಶೀಲನೆ ನಡೆಯುತ್ತಿದೆ. ಆದರೆ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಪ್ರಗತಿ ಪರಿಶೀಲನೆ ನಡೆದಿಲ್ಲ. ಉಪ ನಿರ್ದೇಶಕರಿಗೆ ಕಚೇರಿ ಕೆಲಸಗಳೇ ಹೆಚ್ಚಾಗಿವೆ. ಶಾಲೆಗೆ ಭೇಟಿ ಕೊಟ್ಟು ಶಿಕ್ಷಕರ ಪಾಠ ಬೋಧನೆಯ ವಿಧಾನ ಪರಿಶೀಲಿಸುವಷ್ಟು ಸಮಯ ಸಹ ಉಳಿದಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೇಗೆ ಹೆಚ್ಚಾಗಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಒಂದು ಅವಧಿಯಲ್ಲಿ ರಾಜ್ಯದಲ್ಲಿ 74 ಲಕ್ಷ ಕನ್ನಡ ವಿದ್ಯಾರ್ಥಿಗಳು ಹಾಗೂ 58 ಲಕ್ಷ ಇಂಗ್ಲಿಷ್‌ ವಿದ್ಯಾರ್ಥಿಗಳು ಇದ್ದರು. ಪ್ರಸ್ತುತ ಇಂಗ್ಲಿಷ್‌ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ, ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪ್ರತಿ ವರ್ಷ ಎರಡು 2 ಲಕ್ಷ ವಿದ್ಯಾರ್ಥಿಗಳು ಕನ್ನಡ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳು ಇವೆ. ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಒಂದು ಸಾವಿರ ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಿದೆ. ಆದರೆ 44 ಸಾವಿರ ಕನ್ನಡ ಶಾಲೆಗಳ ಸುಧಾರಣೆಗೆ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರಿ ಇಂಗ್ಲಿಷ್‌ ಶಾಲೆ ಬೇಕು ಎಂದು ಯಾರೂ ಕೇಳಿರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದರು. ಎಚ್‌.ಡಿ.ರೇವಣ್ಣ ಸೂಚಿಸಿದರೆ, ಎಚ್‌.ಡಿ.ದೇವೇಗೌಡ ಅನುಮೋದಿಸಿದರು. ವಿಧಾನಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಧಾರ ಇದಲ್ಲ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿಲ್ಲ. ಈಗಾಗಲೇ ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು ಹೇರಲಾಗಿದೆ. ಇದೀಗ ಇಂಗ್ಲಿಷ್‌ ಶಾಲೆಗಳೂ ಆರಂಭವಾಗಿವೆ. ವಿದ್ಯಾರ್ಥಿಗಳ ಮಾತೃ ಭಾಷೆ ಕನ್ನಡವಾಗಿದ್ದರೂ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ಹೇರಿಕೆಯಿಂದಾಗಿ ಯಾವುದೊಂದು ಭಾಷೆಯನ್ನೂ ಪರಿಪೂರ್ಣವಾಗಿ ಕಲಿಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಕನ್ನಡಕ್ಕೆ ಗಂಡಾಂತರ ಕಾದಿದೆ’ ಎಂದು ಎಚ್ಚರಿಸಿದರು.

ಡಯಟ್ ಪ್ರಾಚಾರ್ಯ ಸಕ್ರಪ್ಪಗೌಡ ಬಿರಾದಾರ ಮಾತನಾಡಿ, ‘ಇಂದಿನ ಮಕ್ಕಳು ಕಲಿಕೆಯಲ್ಲಿ ಚುರುಕಾಗಿದ್ದಾರೆ. ಹೀಗಾಗಿ ಶಿಕ್ಷಕರು ಸತತ ಅಧ್ಯಯನದ ಮೂಲಕ ಬೋಧನಾ ವಿಧಾನದಲ್ಲಿ ಹೊಸತನ ಅನುಸರಿಸಬೇಕು. ಮಗುವಿಗೆ ಹೊಸತನ್ನು ಕಲಿಸದಿದ್ದರೆ ಹಿಂದೆ ಬೀಳುತ್ತವೆ’ ಎಂದು ತಿಳಿಸಿದರು.

‘ಅಧ್ಯಯನ ಪ್ರವೃತ್ತಿಯುಳ್ಳವರು ಹಾಗೂ ಮಕ್ಕಳು ಓದುವಂತೆ ಮಾಡುವವರೇ ನಿಜವಾದ ಶಿಕ್ಷಕರು. ಸತತ ಅಧ್ಯಯನದಿಂದ ಶಿಕ್ಷಕನ ಮೂಲತತ್ವದ ಅಡಿಪಾಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ’ ಎಂದು ಹೇಳಿದರು.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಕೆ.ಆರ್.ದುರ್ಗಾದಾಸ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಟಿ.ಆರ್.ದೊಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಾಬುರಾವ್ ಸಲ್ಸಾರೆ ಹಾಗೂ ಅರಣ್ಯ ಅಧಿಕಾರಿ ಶಿವರಾಜ ಇದ್ದರು.

‘ಪ್ರೌಢಶಾಲಾ ಕನ್ನಡ ಪಠ್ಯಕ್ರಮದ ವಿಮರ್ಶಾತ್ಮಕ ಪ್ರತಿಕ್ರಿಯೆ’ ಕುರಿತು ಬಸವರಾಜ ಕೋಡಗುಂಟಿ, ‘ಕನ್ನಡ ಪಠ್ಯಕ್ರಮ ಮತ್ತು ಇತಿಹಾಸದ ಅರಿವು’ ಕುರಿತು ಪ್ರೊ. ಪರಮಶಿವಮೂರ್ತಿ ಹಾಗೂ ‘ಕನ್ನಡ ಪಠ್ಯಕ್ರಮದಲ್ಲಿ ಭಾಷೆ ಮತ್ತು ವ್ಯಾಕರಣ’ ಕುರಿತು ಪ್ರೊ. ಪಿ.ಮಹಾದೇವಯ್ಯ ಉಪನ್ಯಾಸ ನೀಡಿದರು.

ಮಹಾಂತೇಶ ಕೆ. ಸ್ವಾಗತಿಸಿದರು. ಶಿವಲಿಂಗ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.