ADVERTISEMENT

ಪೋಷಣಾ ಅಭಿಯಾನ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:24 IST
Last Updated 19 ಡಿಸೆಂಬರ್ 2020, 16:24 IST
ಬೀದರ್‌ನಲ್ಲಿ ನಡೆದ ಪೋಷಣಾ ಅಭಿಯಾನ ಯೋಜನೆಯ ಜಿಲ್ಲಾಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು
ಬೀದರ್‌ನಲ್ಲಿ ನಡೆದ ಪೋಷಣಾ ಅಭಿಯಾನ ಯೋಜನೆಯ ಜಿಲ್ಲಾಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು   

ಬೀದರ್: ಮಕ್ಕಳು ಹಾಗೂ ಮಹಿಳೆಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಜಾರಿಗೊಳಿಸಿರುವ ಪೋಷಣಾ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೋಷಣಾ ಅಭಿಯಾನ ಯೋಜನೆಯ ಜಿಲ್ಲಾಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯೊಂದಿಗೆ ನಿಯಮಿತವಾಗಿ ಗರ್ಭಿಣಿ, ಬಾಣಂತಿ, ಹದಿಹರೆಯದ ಹೆಣ್ಣುಮಕ್ಕಳ ಹಿಮೊಗ್ಲೋಬಿನ್ ತಪಾಸಣೆ ಮಾಡಬೇಕು. ಜನನದ ವೇಳೆ ಕಡಿಮೆ ತೂಕ ಹೊಂದಿರುವ ಮಕ್ಕಳನ್ನು ಗುರುತಿಸಬೇಕು. ಪೋಷಕರಿಗೆ ಅಶಕ್ತ ನವಜಾತ ಮಗುವಿನ ಆರೈಕೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ADVERTISEMENT

ಆರು ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕಂಠಿತ, ಕಡಿಮೆ ತೂಕದ ಮಕ್ಕಳ ಜನನ, 6 ರಿಂದ 59 ತಿಂಗಳ ಒಳಗಿನ ಮಕ್ಕಳು, 15 ರಿಂದ 49 ವರ್ಷದ ಕಿಶೋರಿ ಅಥವಾ ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆಯನ್ನು ತಡೆಗಟ್ಟುವ ಯೋಜನೆಯ ಉದ್ದೇಶ ಸಾಕಾರಕ್ಕೆ ಅಧಿಕಾರಿಗಳು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು.

ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾಯಕರ್ತೆಯರಿಗೆ ಮೊಬೈಲ್ ಹಾಗೂ ಇತರ ಪರಿಕರಗಳನ್ನು ಸರಿಯಾಗಿ ವಿತರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2018-19ರಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈವರೆಗೆ ಸಮುದಾಯ ಆಧಾರಿತ ಅನೇಕ ಚಟುವಟಿಕೆಗಳನ್ನು ಆಯೋಜಿಸಿ ಸುಮಾರು ನಾಲ್ಕು ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಉಪ ವಿಭಾಗಾಧಿಕಾರಿಗಳಾದ ಭುವನೇಶ ಪಾಟೀಲ, ಗರಿಮಾ ಪನ್ವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.