ADVERTISEMENT

ಹುಮನಾಬಾದ್ | ಮಳೆ ಕೊರತೆ: ಆತಂಕದಲ್ಲಿ ರೈತರು

18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಪೂರ್ವ ಮುಂಗಾರು ಬಿತ್ತನೆ

ಪ್ರಜಾವಾಣಿ ವಿಶೇಷ
Published 17 ಜೂನ್ 2023, 23:36 IST
Last Updated 17 ಜೂನ್ 2023, 23:36 IST
ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೊಳವೆಬಾವಿ ಮೂಲಕ ಸೋಯಾಬಿನ್‌ಗೆ ನೀರು ಹಾಯಿಸಲಾಯಿತು
ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೊಳವೆಬಾವಿ ಮೂಲಕ ಸೋಯಾಬಿನ್‌ಗೆ ನೀರು ಹಾಯಿಸಲಾಯಿತು   

ಗುಂಡು ಅತಿವಾಳ

ಹುಮನಾಬಾದ್: ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದೆ. ಆದ್ದರಿಂದ ಮುಂಗಾರು ಹಂಗಾಮು ಬಿತ್ತನೆ ಕುಂಠಿತಗೊಂಡಿದೆ.

179.3 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 58 ಮಿ.ಮೀ ಮಳೆಯಾಗಿದ್ದು, 62.1, ಮಿ.ಮೀ ಕೊರತೆಯಾಗಿದೆ. ಇದು ಬಿತ್ತನೆಯ ಮೇಲೆ ಪರಿಣಾಮ ಬೀರಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಬಿತ್ತನೆ ಶೇ 4ರಷ್ಟು ಮಾತ್ರ ಪೂರ್ಣಗೊಂಡಿದೆ.

ADVERTISEMENT

ಮುಂಗಾರು ಹಂಗಾಮು ಬಿತ್ತನೆಗೆ ಸಜ್ಜಾಗಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಪೂರ್ವ ಮುಂಗಾರು ನಿರೀಕ್ಷೆಯಷ್ಟು ಸುರಿಯದೇ ಇರುವುದು ರೈತರನ್ನು ಹೈರಾಣು ಮಾಡಿದೆ. ಮುಂಗಾರು ಪ್ರವೇಶ ವಿಳಂಬ ಆಗುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಸುಮಾರು 65,085 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮು ಬಿತ್ತನೆಯ ನಿರೀಕ್ಷೆ ಇದೆ. ಇದರಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಬಿತ್ತನೆ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಈ ಬಾರಿ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷವೂ ಇದೇ ರೀತಿ ಬಿತ್ತನೆಗೆ ಸಮಸ್ಯೆ ಆಗಿತ್ತು.

ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಸೋಯಾ ಹಾಗೂ ತೊಗರಿ ಬಿತ್ತನೆ ಆರಂಭವಾಗಬೇಕಿತ್ತು. ಮಳೆ ಕೊರತೆ ಪರಿಣಾಮ ಬಿತ್ತನೆ ಆಗುತ್ತಿಲ್ಲ. ಉದ್ದು ಹಾಗೂ ‌ಹೆಸರು ಬಿತ್ತನೆಗೆ ಜೂನ್ ಅಂತ್ಯದವರೆಗೂ ಕಾಲಾವಕಾಶವಿದೆ. ಸೋಯಾ ಜುಲೈ 15 ರವರೆಗೆ ಬಿತ್ತನೆ ಮಾಡಬಹುದು. ಆದರೆ ನಿರೀಕ್ಷೆಯಷ್ಟು ಮಳೆ ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಪೂರ್ವ ಮುಂಗಾರು ಮಳೆಗೆ ಸೋಯಾ, ಹೆಸರು, ಉದ್ದು ಸೇರಿ ಇತರ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಮಳೆಯ ಕೊರತೆಯಿಂದ 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಪೂರ್ವ ಮುಂಗಾರು ಬಿತ್ತನೆಯಾಗಿದೆ. ದಿನ ಕಳೆದಂತೆ ಈ ಬೆಳೆ ಬಿತ್ತನೆ ಅವಧಿ ಮುಗಿಯುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ್ ಹೇಳಿದ್ದಾರೆ.

ಹೆಸರು ಹಾಗೂ ಉದ್ದು ಬಿತ್ತನೆ ವಿಳಂಬವಾದರೆ ಪರ್ಯಾಯವಾಗಿ ಸೋಯಾ ಬೆಳೆಯಲು ರೈತರು ಒಲವು ತೋರುತ್ತಿದ್ದಾರೆ. ಹೀಗಾಗಿ ಅಗತ್ಯ ಇರುವಷ್ಟು ಕೃಷಿ ಇಲಾಖೆಯಲ್ಲಿಯೂ ಬಿತ್ತನೆ ಬೀಜದ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಖಾಸಗಿ ಮತ್ತು ಪಿಕೆಪಿಎಸ್ ಸೇರಿ ಒಟ್ಟು 3 ಸಾವಿರ ಟನ್‌ ರಸಗೊಬ್ಬರ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಗೌತಮ್ ತಿಳಿಸಿದರು.

ಗೌತಮ್
ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬೀಜ ರಸಗೊಬ್ಬರ ವಿತರಣೆ ಮಾಡಲಾಗಿದೆ. ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ನಿರ್ಣಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಆಗಿದೆ. ಆದರೆ ವಾಡಿಕೆಯಷ್ಟು ಆಗಿಲ್ಲ. ಹೀಗಾಗಿ ವಾಡಿಕೆಯಷ್ಟು ಮಳೆ ಆದರೆ ಮಾತ್ರ ಬಿತ್ತನೆ ಮಾಡಿ
-ಗೌತಮ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಮಳೆ ಬಂದ ಕಾರಣ ಬಿತ್ತನೆ ಮಾಡಿದ್ದೇವೆ. ಆದರೆ ಕಳೆದ ಐದಾರು ದಿನಗಳಿಂದ ಮಳೆ ಇಲ್ಲ. ಮೊಳಕೆ ಒಡೆಯುವ ಹಂತದಲ್ಲಿ ಬೆಳೆ ಇದೆ. ಸದ್ಯ ನೀರು ಬೇಕು
-ಮಂಜುನಾಥ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.