ಔರಾದ್: ಬೀದರ್‌ನ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜೂನ್ 15 ರಂದು ನಡೆಯಲಿರುವ ಅಹಿಲ್ಯಾಬಾಯಿ ಹೋಳ್ಕರ್ ಜಯಂತಿ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಶನಿವಾರ ಪಟ್ಟಣದಲ್ಲಿ ಬಿಡುಗಡೆ ಮಾಡಲಾಯಿತು.
ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಭಿತ್ತಿಪತ್ರ ಬಿಡುಗಡೆ ಮಾಡಿ, ‘ಬೀದರ್ ನಗರಲ್ಲಿ ಬಹಳ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಅಹಿಲ್ಯಾಬಾಯಿ ಹೋಳ್ಕರ್ ಅವರು ಕಾಶಿ ವಿಶ್ವನಾಥ ದೇವಸ್ಥಾನ ಸೇರಿದಂತೆ 12 ಜ್ಯೋತಿರ್ಲಿಂಗ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಹಿಂದೂ ಧರ್ಮದ ರಕ್ಷಣೆಗೆ ನಿಂತಿದ್ದರು ಎಂದರು. ಗೊಂಡ-ಹಟಕಾರ್ ಸಮುದಾಯದವರು ಒಂದಾಗಿದ್ದು, ಎಲ್ಲ ಸಮಾಜದ ಜನರನ್ನು ಸೇರಿಸಿಕೊಂಡು ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
‘ಶಿವಯೋಗಿ ಮಚ್ಚೇಂದ್ರನಾಥ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ. ಹೋಳ್ಕರ್ ವಂಶಸ್ಥರಾದ ಭೂಷಣಸಿಂಗ್ ಹಾಗೂ ಮುಖಂಡ ಕೆ.ಎಸ್ ಈಶ್ವರಪ್ಪ, ಗ್ಯಾರಂಟಿ ಯೋಜನೆಯ ರಾಜಾಧ್ಯಕ್ಷ ಎಚ್.ಎಂ ರೇವಣ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಪಂಡಿತರಾವ ಚಿದ್ರಿ ಮಾತನಾಡಿ, ‘ಹೋಳ್ಕರ್ ಜಯಂತಿಯನ್ನು ಹಬ್ಬದಂತೆ ಆಚರಿಸಲು ಎಲ್ಲರೂ ಕೈಜೋಡಿಸಬೇಕು’ ಎಂದರು.
ಉತ್ಸವ ಸಮಿತಿಯ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ಕಾರ್ಯಾಧ್ಯಕ್ಷ ಬಾಲಾಜಿರಾವ ನಾಯ್ಕ್, ರಾಮ ನರೋಟೆ, ಧೋಂಡಿಬಾ ನರೋಟೆ, ಕೊಂಡಿಬಾರಾವ ಪಾಂಡ್ರೆ, ಸಿದ್ದು ಲೌಟೆ, ಕಿಶನರಾವ ನಾಯ್ಕ್, ಜೆಂಜೇರಾವ, ವೆಂಕಟರಾವ ಡೊಂಬಾಳೆ, ಬಾಲಾಜಿ ಅಮರವಾಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.